Advertisement

ಹೆದ್ದಾರಿ ಚರಂಡಿ ಕಾಮಗಾರಿ ಅಪೂರ್ಣ

11:18 PM Jun 16, 2019 | sudhir |

ಹೆಮ್ಮಾಡಿ: ಮುಂಗಾರು ಕೊಂಚ ತಡವಾದರೂ ಆರಂಭದಲ್ಲೇ ಬಿರುಸಿನ ಮಳೆ ಸುರಿದಿದ್ದರಿಂದ ತಾಲೂಕಿನಾದ್ಯಂತ ಕೃಷಿಕರು ಹುರುಪಿನಿಂದಲೇ ಭತ್ತ ನಾಟಿ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ ಹೆದ್ದಾರಿಯ ಚರಂಡಿ ಅಪೂರ್ಣ ಕಾಮಗಾರಿಯಿಂದಾಗಿ ತಲ್ಲೂರು ಗ್ರಾಮದ ಕಲ್ಕೆರೆಯ ರೈತರಿಗೆ ಈ ಬಾರಿಯೂ ಸಂಕಷ್ಟ ಎದುರಾಗಿದೆ.

Advertisement

ಗದ್ದೆಗಳನ್ನು ಹಡಿಲು ಬಿಡುವ ಸ್ಥಿತಿ ನಿರ್ಮಾಣ
ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಜೇಡಿ ಮಣ್ಣು ಮಿಶ್ರಿತ ಕೊಳಚೆ ನೀರು ನೇರವಾಗಿ ಇಲ್ಲಿನ ಗದ್ದೆಗಳಿಗೆ ನುಗ್ಗುವುದರಿಂದ ಭತ್ತ ನಾಟಿ ಕಾರ್ಯ ಮಾಡಲಾಗದೆ, ಫಲವತ್ತಾಗಿ ಫಸಲು ಬೆಳೆಯುವ ಗದ್ದೆಗಳನ್ನು ಹಡಿಲು ಬಿಡುವ ಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ಗುತ್ತಿಗೆ ಕಂಪೆನಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಇಲ್ಲಿನ ರೈತರ ಅಭಿಪ್ರಾಯಗಳನ್ನು ಪಡೆಯದ ಕಾರಣ ಕಳೆದ 2-3 ವರ್ಷಗಳಿಂದಲೂ ಇಲ್ಲಿ ಇದೇ ಪರಿಸ್ಥಿತಿ ಇದೆ.

ಕಳೆದ ವರ್ಷ ವ್ಯವಸ್ಥಿತವಾದ ಚರಂಡಿ ವ್ಯವಸ್ಥೆಯಿಲ್ಲದೆ ಮೇಲಿನ ಪೇಟೆಯಿಂದ ಬರುವ ಕೊಳಚೆ ನೀರು ನೇರವಾಗಿ ಮನೆಗಳಿಗೆ ಹಾಗೂ ಕಲ್ಕೆರೆ ಕೃಷಿ ಪ್ರದೇಶಗಳಿಗೆ ನುಗ್ಗಿತ್ತು. ರಸ್ತೆ ಕಾಮಗಾರಿಗಾಗಿ ತಂದು ಸುರಿಯಲಾಗಿದ್ದ ಮಣ್ಣು ನೀರಿನೊಂದಿಗೆ ಕೊಚ್ಚಿಕೊಂಡು ಗದ್ದೆ ಪ್ರವೇಶಿಸಿದ್ದರಿಂದ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿಡುವಂತಾಯಿತು. ನಾಲ್ಕು ವರ್ಷಗಳಿಂದ ಇರುವ ಸಮಸ್ಯೆ ಈಗಲೂ ಹಾಗೆಯೇ ಇದೆ.

ಕಾಮಗಾರಿ ನಿಧಾನದಿಂದ ಅವ್ಯವಸ್ಥೆ
ಇಲ್ಲಿನ ಹೆದ್ದಾರಿ ಅವ್ಯವಸ್ಥೆಯ ಕುರಿತು ಸ್ಥಳೀಯ ನಿವಾಸಿಗಳು, ರಿûಾ ಚಾಲಕರ ನಿರಂತರ ಹೋರಾಟದ ಫಲವಾಗಿ ಈ ಬಾರಿ ಮಳೆಗಾಲದ ಆರಂಭಕ್ಕೂ ಮೊದಲು ವ್ಯವಸ್ಥಿತ ಚರಂಡಿ ಕಾಮಗಾರಿಗೆ ಗುತ್ತಿಗೆ ಕಂಪೆನಿ ಮುಂದಾಗಿತ್ತು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ಮಳೆ ಶುರುವಾದರೂ ಅಪೂರ್ಣವಾಗಿಯೇ ಉಳಿದಿದೆ. ಹೀಗಾಗಿ ಕೃಷಿ ಭೂಮಿಗೆ ಕೊಳಚೆ ನೀರು ಪ್ರವೇಶಿಸಿ, ಈ ಬಾರಿಯೂ ಭಾಗದ ರೈತರು ನಾಟಿ ಕಾರ್ಯದಿಂದ ದೂರ ಉಳಿಯಬೇಕಾಗಿದೆ.

ಯಾರೂ ಸ್ಪಂದಿಸಿಲ್ಲ
ಚತುಷ್ಪಥ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಕೃಷಿ ಮಾಡುವುದನ್ನೇ ಕೈ ಬಿಟ್ಟಿದ್ದೇವೆ. ರಸ್ತೆ ಕಾಮಗಾರಿಗೆ ತಂದು ಸುರಿಯಲಾದ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಗದ್ದೆ ಸೇರುತ್ತಿದೆ. ನಮ್ಮ ಸಮಸ್ಯೆಗಳಿಗೆ ಇದುವರೆಗೂ ಯಾರೊಬ್ಬರೂ ಸ್ಪಂದಿಸಿಲ್ಲ. ಚರಂಡಿ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಸಮಸ್ಯೆ ಬಗೆಹರಿಯಬಹುದು.
– ಶಶಿರಾಜ್‌, ಕೃಷಿಕರು, ಚಿತ್ತೇರಿಮಕ್ಕಿ ನಿವಾಸಿ

Advertisement

ಸಮಸ್ಯೆ ಪರಿಹಾರಕ್ಕೆ ಸೂಚನೆ
ತಲ್ಲೂರು, ಹೆಮ್ಮಾಡಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಗದ್ದೆಗಳಿಗೆ ನುಗ್ಗುವ ಬಗ್ಗೆ ಇತ್ತೀಚೆಗಷ್ಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ. ಚರಂಡಿ ಅವ್ಯವಸ್ಥೆಯನ್ನು ಕೂಡಲೇ ಸರಿ ಮಾಡುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಮತ್ತೆ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಗುವುದು.
– ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಬಗೆಹರಿಸುವ ಪ್ರಯತ್ನ
ತಲ್ಲೂರು ಅರೆಬರೆ ಚರಂಡಿ ಕಾಮಗಾರಿಯಿಂದಾಗಿ ಕಲ್ಕೆರೆ ಕೃಷಿ ಗದ್ದೆಗಳಿಗೆ ನೀರು ನುಗ್ಗುತ್ತಿರುವ ಮಾಹಿತಿ ಈಗ ತಾನೆ ನನ್ನ ಗಮನಕ್ಕೆ ಬಂದಿದೆ. ಹಿಂದೆಯೂ ಹಲವು ಬಾರಿ ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಬಾರಿಯೂ ಸಮಸ್ಯೆ ಮುಂದುವರಿದಿದ್ದು, ಗುತ್ತಿಗೆದಾರರನ್ನು ಕರೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತೇನೆ.
-ತಿಪ್ಪೇಸ್ವಾಮಿ, ತಹಶೀಲ್ದಾರರು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next