ದಾವಣಗೆರೆ: ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ನಡುವೆ ನಿರ್ಮಾಣವಾಗುತ್ತಿರುವ ಷಟ್ಪಥ ಹೆದ್ದಾರಿಯಲ್ಲಿನ ಲೋಪ ಸರಿಪಡಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್, ಸಂಸತ್ ಕಲಾಪದ ಶೂನ್ಯವೇಳೆಯಲ್ಲಿ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು, ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡುವಾಗ ಹಲವಾರು ಲೋಪ ಎಸಗಿದ್ದಾರೆ. ಸಾರ್ವಜನಿಕರ ಬೇಡಿಕೆಯಂತೆ ಸೇತುವೆಗಳನ್ನು ನಿರ್ಮಾಣ ಮಾಡಿಲ್ಲ. ಈ ಎಲ್ಲಾ ನ್ಯೂನತೆಗಳನ್ನು ಷಟ್ಪಥ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಸರಿಪಡಿಸಬೇಕೆಂದು ಒತ್ತಾಯಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಸಚಿವರ ಗಮನ ಸೆಳೆದರು.
ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ನಡುವೆ ಸಾರ್ವಜನಿಕರ ಬೇಡಿಕೆಯಂತೆ ಲಕ್ಕಮುತ್ತೇನಹಳ್ಳಿ,ಹೆಬ್ಟಾಳು, ಹಾಲುವರ್ತಿ, ಮಲ್ಲಶೆಟ್ಟಿಹಳ್ಳಿ, ಎಚ್.ಕಲ್ಪನಹಳ್ಳಿ ಹತ್ತಿರ ಕೆಳ ಸೇತುವೆಹಾಗೂ ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ಅವರಗೆರೆ ಕ್ರಾಸ್ ಬಳಿಯ ಚಿಂದೋಡಿ ಲೀಲಾ ವೃತ್ತದಲ್ಲಿ ಎರಡು ವೆಂಟ್ ಗಳ ಬೃಹತ್ ಕೆಳ ಸೇತುವೆ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು ಹಾಗೂ ಅನೇಕ ಬಾರಿ ಖುದ್ದಾಗಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದ್ದರೂ ಈವರೆಗೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಎಲ್ಲಾ ಕಾಮಗಾರಿಗಳು ಅತ್ಯಂತ ಅವಶ್ಯಕವಾಗಿವೆ. ಷಟ್ಪಥ ಹೆದ್ದಾರಿ ನಿರ್ಮಾಣ ಯೋಜನೆಯಡಿ ಸೇರ್ಪಡೆ ಮಾಡಿ ಕಾಮಗಾರಿಗಳನ್ನುಕೈಗೊಳ್ಳುವಂತೆ ಹೆದ್ದಾರಿ ಸಚಿವರಿಗೆ ಸೂಚಿಸುವಂತೆ ಸಂಸದರು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಷಟ್ಪಥ ಹೆದ್ದಾರಿ ನಿರ್ಮಾಣ ಮಾಡಲು ಸಾರ್ವಜನಿಕರು ಅಡ್ಡಿಪಡಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯನ್ನುಗಮನದಲ್ಲಿಟ್ಟುಕೊಂಡು ಆದಷ್ಟು ಬೇಗನೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿದರು.