ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ವೇಗವನ್ನು ಪ್ರಾರಂಭದಲ್ಲಿ ಹೊಗಳಿದ್ದ ಸಾರ್ವಜನಿಕರು ಇದೀಗ ಮಳೆಯಿಂದ ಹೆದ್ದಾರಿ ಅವ್ಯವಸ್ಥೆಯನ್ನು ಕಂಡು ಹಿಡಿಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ಕಾಮಗಾರಿಯ ಭಾಗವಾಗಿ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಸೇರಿದಂತೆ ಮಾಣಿವರೆಗೂ ಹೆದ್ದಾರಿಯನ್ನು ಅಗೆಯುವ ಜತೆಗೆ ವಿಸ್ತರಣೆಗೆ ಇಕ್ಕೆಡೆಗಳ ಗುಡ್ಡಗಳನ್ನೂ ಅಗೆದಿರುವ ಪರಿಣಾಮ ಹೆದ್ದಾರಿಯುದ್ದಕ್ಕೂ ಕೆಸರು ತುಂಬಿಕೊಂಡಿದ್ದು, ಸಾರ್ವಜನಿಕರು ನಡೆದಾಡುವುದಕ್ಕೂ ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಗಿದೆ.
ಕಲ್ಲಡ್ಕ ಪೇಟೆಯ ಸ್ಥಿತಿಯಂತೂ ಅಯೋಮಯವಾಗಿದ್ದು, ಜನತೆ ಪೇಟೆಗೆ ಕಾಲಿಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ಕೆಲಸಗಳಿಗೆ ಪೇಟೆಗೆ ಆಗಮಿಸುವವರ ಸ್ಥಿತಿ ಚಿಂತಾಜನಕವಾಗಿದ್ದು, ಕಲ್ಲಡ್ಕದ ವಿದ್ಯಾಸಂಸ್ಥೆಗಳಿಗೆ ಆಗಮಿಸುವ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಎದ್ದುಬಿದ್ದು ಸಾಗಬೇಕಾದ ಸ್ಥಿತಿ ಇದೆ.
ಕಾಮಗಾರಿಯನ್ನು ವೇಗವಾಗಿ ಮುಗಿಸುವ ನಿಟ್ಟಿನಲ್ಲಿ ಗುತ್ತಿಗೆ ಸಂಸ್ಥೆಯು ಯಾವುದೇ ಮುಂದಾಲೋಚನೆ ಇಲ್ಲದೆ ಎಲ್ಲೆಂದರಲ್ಲಿ ಅಗೆದು ಹಾಕಿರುವ ಪರಿಣಾಮ ಈ ಸ್ಥಿತಿ ಇದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಈ ಕುರಿತು ಗ್ರಾ.ಪಂ.ನವರು ಕೂಡ ಗುತ್ತಿಗೆ ಸಂಸ್ಥೆಯನ್ನು ಎಚ್ಚರಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಸಂಪೂರ್ಣ ಕೆಸರು ತುಂಬಿ ಕೊಂಡಿರುವುದರಿಂದ ಚಪ್ಪಲಿ ಹಾಕಿ ನಡೆದಾಡುವುದೇ ಸಾಹಸವಾಗಿದ್ದು, ವೃದ್ಧರು, ಅನಾರೋಗ್ಯ ಪೀಡಿತರು ಇತರರನ್ನು ಆಶ್ರಯಿಸಿ ನಡೆದಾಡಬೇಕಾದ ಸ್ಥಿತಿ ಇದೆ. ದಿನವಿಡೀ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ನಿರ್ವಹಿಸುವ ಸಂಸ್ಥೆಗೂ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದು ಕಷ್ಟವಾಗಿದ್ದು, ಹೀಗಾಗಿ ಸಾರ್ವಜನಿಕರು ಗುತ್ತಿಗೆ ಸಂಸ್ಥೆಯ ಜತೆಗೆ ತಮ್ಮ ಗ್ರಾಮ ಪಂಚಾಯತ್‌ಗೂ ಹಿಡಿಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗುತ್ತಿಗೆ ಸಂಸ್ಥೆಯ ಪ್ರಮುಖರನ್ನು ಕರೆದು ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಬೇಕಿದೆ.