Advertisement
ಮಂಗಳೂರು: ನಿಮಗೆ ಈ ಸಂಗತಿ ಗೊತ್ತಿರಬಹುದು. ಇಂದು ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲಿ ಯುವಜನರೇ ಹೆಚ್ಚು. ಒಂದು ವರ್ಷದಲ್ಲಿ ಘಟಿಸುವ ಅಪಘಾತಗಳಲ್ಲಿ ಮರಣಕ್ಕೀಡಾಗುವ 9 ಸಾವಿರ ಮಂದಿ 18 ವರ್ಷದೊಳಗಿನವರು.
Related Articles
ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಹಾಸನದಿಂದ ಮಂಗಳೂರುವರೆಗಿನ ಎನ್‌ಎಚ್-75 ಹಾಗೂ ತಲಪಾಡಿಯಿಂದ ಶಿರೂರು ವರೆಗಿನ ಎನ್‌ಎಚ್-66 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗಿರುವ ಎರಡು ಪ್ರಮುಖ ರಸ್ತೆಗಳು. ಜತೆಗೆ, ಕುಲಶೇಖರದಿಂದ ಮೂಡುಬಿದಿರೆ ಮೂಲಕ 169 ರಾಷ್ಟ್ರೀಯ ಹೆದ್ದಾರಿ ಕೂಡ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 177 ಕಿ.ಮೀ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 142 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ.
Advertisement
ಆದರೆ ಬೆಂಗಳೂರು-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75, ಕೇರಳದಿಂದ ಮಂಗಳೂರಿಗೆ ಹಾಗೂ ಉಡುಪಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ -66ರಲ್ಲಿ ಅಪಘಾತ ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಆತಂಕ ಸೃಷ್ಟಿಸಿದೆ.
ಸರಕಾರದ ಅಂಕಿ-ಅಂಶದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018ರಲ್ಲಿ ಒಟ್ಟು 948 ಅಪಘಾತಗಳು ಸಂಭವಿಸಿದ್ದರೆ, ಆ ಪೈಕಿ 420 ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿವೆ.
ಕಳೆದ ವರ್ಷ ಜಿಲ್ಲೆಯಲ್ಲಿ 83 ಮಂದಿ ಪ್ರಾಣ ಕಳೆದುಕೊಂಡರು. 462 ಮಂದಿ ಗಾಯಗೊಂಡರು. ಈ ಅಪಘಾತಗಳ ಪೈಕಿ 81 ಮರಣಾಂತಿಕ ಹಾಗೂ 339 ಅಪಘಾತಗಳು ಮರಣಾಂತಿಕವಲ್ಲದ ಅಪಘಾತಗಳಾಗಿವೆ. ಜಿಲ್ಲೆಯಲ್ಲಿ ಹಾದು ಹೋದ 177 ಕಿ. ಮೀ. ವ್ಯಾಪ್ತಿಯಲ್ಲಿ ಘಟಿಸುತ್ತಿರುವ ಸಮಸ್ಯೆಯಿದು.
ಈ ಹಿನ್ನೆಲೆಯಲ್ಲೇ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಘಟಿಸುತ್ತಿರುವ ಅಪಘಾತಗಳಿಗೆ ಕಾರಣಗಳೇನು? ಈ ಭಾಗದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಕಾಮಗಾರಿ ಹೇಗೆ ಅಪಘಾತಕ್ಕೆ ಕಾರಣವಾಗುತ್ತಿವೆ, ಎಲ್ಲೆಲ್ಲಿ ಅಪಘಾತ ವಲಯಗಳಿವೆ, ಸಂಚಾರ ನಿಯಮ ಉಲ್ಲಂಘನೆಯೂ ಎಷ್ಟರ ಕೊಡುಗೆ ನೀಡುತ್ತಿದೆ-ಎಂಬಿತ್ಯಾದಿ ವಾಸ್ತವಾಂಶವನ್ನು ಅರಿಯಬೇಕಿದೆ.
ಅದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ತಂಡವು ಎನ್‌ಎಚ್-75ರಲ್ಲಿ ನಂತೂರಿನಿಂದ ಕೊಕ್ಕಡದ ಕ್ರಾಸ್‌ವರೆಗಿನ ಸುಮಾರು 60 ಕಿ.ಮೀ. ರಸ್ತೆ ಹಾಗೂ ಎನ್‌ಎಚ್-66ರಲ್ಲಿ ತಲಪಾಡಿಯಿಂದ ಹೆಜಮಾಡಿ ಟೋಲ್‌ವರೆಗಿನ ಸುಮಾರು 30 ಕಿ. ಮೀ. ಹೆದ್ದಾರಿಯಲ್ಲಿ ಪ್ರಯಾಣಿಸಿ ವಸ್ತುಸ್ಥಿತಿಯನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಿದೆ. ಇದು ಮೊದಲ ಕಂತು. ಎರಡನೇ ಕಂತಿನಲ್ಲಿ ಹೆಜಮಾಡಿಯಿಂದ ಕುಂದಾಪುರ ಹಾಗೂ ಮೂರನೇ ಕಂತಿನಲ್ಲಿ ಕುಂದಾಪುರದಿಂದ ಶಿರೂರುವರೆಗಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಓದುಗರ ಮುಂದಿಡಲಿದೆ ನಮ್ಮ ತಂಡ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ, ಹೆದ್ದಾರಿ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆ ಕಂಪೆನಿಗಳ ಬೇಜವಾಬ್ದಾರಿ ತನ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯನ್ನು ಜನರ ಮುಂದಿಡುವುದರ ಜತೆಗೆ, ನಾಗರಿಕ ರಾದ ನಾವೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತ ಗಳನ್ನು ಹೇಗೆ ತಡೆಯಬಹುದು ಎಂಬುದನ್ನೂ ಇಲ್ಲಿ ವಿವರಿಸುವುದು ಉದಯವಾಣಿಯ ಆಶಯ.