Advertisement

Highway Problem: ಕುಂದಾಪುರ -ತಲಪಾಡಿ ಹೆದ್ದಾರಿಯಲ್ಲಿ ನೀರು ನಿಲ್ಲುವ 40 ಸ್ಥಳಗಳ ಗುರುತು

02:13 AM Oct 20, 2024 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದಿಂದ ಸುರತ್ಕಲ್‌ (ಎನ್‌ಐಟಿಕೆ) ವರೆಗಿನ ಮತ್ತು ನಂತೂರು ಜಂಕ್ಷನ್‌ನಿಂದ ತಲಪಾಡಿಯವರೆಗಿನ ಚತುಷ್ಪಥ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಸ್ಥಳಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಮಗಾರಿಯ ಗುತ್ತಿಗೆ ಕಂಪೆನಿಯಿಂದ ಸರ್ವೆ ಆರಂಭಗೊಂಡಿದೆ.

Advertisement

ಕುಂದಾಪುರದಿಂದ ಸುರತ್ಕಲ್‌ (ಎನ್‌ಐಟಿಕೆ) ನಡುವಿನ ತಲಾ 80 ಕಿ.ಮೀ., ನಂತೂರು ಜಂಕ್ಷನ್‌ನಿಂದ ತಲಪಾಡಿ ನಡುವಣ 15 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ, ಡಿವೈಡರ್‌ ಬಳಿ ಅಲ್ಲಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯುಂಟಾಗುತ್ತದೆ ಮಾತ್ರವಲ್ಲದೆ ಆಗಾಗ ಅಪಘಾತಗಳು ಉಂಟಾಗಿ ಹಲವಾರು ಸಾವುನೋವು ಸಂಭವಿಸಿದೆ.

40 ಸ್ಥಳ ಗುರುತು
ರಾ.ಹೆ. 66ರ ಕುಂದಾಪುರ – ಸುರತ್ಕಲ್‌ ನಡುವೆ ಮತ್ತು ನಂತೂರು – ತಲಪಾಡಿ ನಡುವಿನ ಚತುಷ್ಪಥ ಹೆದ್ದಾರಿಯ ಎರಡು ಬದಿಯ ಒಟ್ಟು 190 ಕಿ.ಮೀ. ರಸ್ತೆಯಲ್ಲಿ ನೀರು ನಿಲ್ಲುವ 40 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ನೀರು ನಿಲ್ಲಲು ಕಾರಣಗಳೇನು, ಸಮತಟ್ಟುಗೊಳಿಸಬೇಕಾದ ಅಗತ್ಯ ಇತ್ಯಾದಿ ಅಂಶಗಳನ್ನು ಸರ್ವೆಯಲ್ಲಿ ಗೊತ್ತುಪಡಿಸಲಾಗುತ್ತಿದೆ.

ಎಲ್ಲೆಲ್ಲಿ ಸರ್ವೆ?
ಕುಂದಾಪುರ – ಸುರತ್ಕಲ್‌ ನಡುವಿನ ಕುಂದಾಪುರ, ಕೋಟ, ಸಾಸ್ತಾನ, ಬ್ರಹ್ಮಾವರ, ಉಚ್ಚಿಲ, ಉಡುಪಿ, ಅಂಬಲಪಾಡಿ, ಕಿನ್ನಿಮೂಲ್ಕಿ, ಪಾಂಗಾಳ, ಕೋತಲಕಟ್ಟೆ, ಕಾಪು, ಕೊಪ್ಪಲಂಗಡಿ, ಮೂಳೂರು, ಉಚ್ಚಿಲ, ಎರ್ಮಾಳು, ಹೆಜಮಾಡಿ, ಕೊಲಾ°ಡು, ಪಾವಂಜೆ ಹಾಗೂ ನಂತೂರು – ತಲಪಾಡಿ ನಡುವಿನ ಕಲ್ಲಾಪು, ಕೆ.ಸಿ. ರೋಡ್‌ ಸಹಿತ 40 ಸ್ಪಾಟ್‌ಗಳಲ್ಲಿ ಸರ್ವೆ ನಡೆಯುತ್ತಿದೆ.

ಉಡುಪಿ ಜಿಲ್ಲೆಯಿಂದ ಸರ್ವೆ ಆರಂಭ
ಹೆದ್ದಾರಿ ಕಾಮಗಾರಿಯ ನಿರ್ವಹಣ ಉಸ್ತುವಾರಿ ವಹಿಸಿಕೊಂಡಿರುವ ಹೈವೇ ಕನ್ಸೇಷನ್ಸ್‌ ವನ್‌ ಕಂಪೆನಿಯ ಸರ್ವೆ ತಂಡ ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆದ್ದಾರಿಯಲ್ಲಿ ಸರ್ವೆ ನಡೆಸುತ್ತಿದ್ದು, ಇದು ಮುಗಿದ ಬಳಿಕ ದ.ಕ.ದಲ್ಲಿ ಮುಂದುವರಿಸಲಿದೆ.

Advertisement

6 ತಿಂಗಳಲ್ಲಿ ಕಾಮಗಾರಿ ಪೂರ್ಣ
ಸರ್ವೆ ಬಳಿಕ ಅದರ ವರದಿಯನ್ನು ಕಂಪೆನಿ ಮತ್ತು ರಾ.ಹೆ. ಪ್ರಾಧಿಕಾರಕ್ಕೆ ನೀಡಲಿದ್ದು, ಅವರಿಂದ ಕಾಮಗಾರಿಗೆ ಮಂಜೂರಾತಿ ಪಡೆದು 4ರಿಂದ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸರ್ವೆ ತಂಡದ ಪ್ರತಿನಿಧಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಉದಯವಾಣಿ ನಿರಂತರ ವರದಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಅಪಾಯಕಾರಿ ಎನಿಸುವ ಪ್ರದೇಶಗಳನ್ನು ಗುರುತಿಸಿ, “ಉದಯವಾಣಿ’ಯು ನಿರಂತರ ವರದಿ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು, ಸರಕಾರ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ಸತತ ವರದಿಗಳು ಮತ್ತು ಜನಪ್ರತಿನಿಧಿಗಳ ವಿಶೇಷ ಒತ್ತಡದ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಸಮಸ್ಯೆ ಬಗೆಹರಿಸುವಂತೆ ಹೆದ್ದಾರಿ ಇಲಾಖೆಯ ಮೂಲಕ ಗುತ್ತಿಗೆದಾರರಿಗೆ ಸೂಚನೆ ನೀಡಿದೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next