Advertisement

ಬೆಳೆಯುತ್ತಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ ಗೋಳು!

02:29 PM Jun 20, 2024 | Team Udayavani |

ಪಡುಬಿದ್ರಿ: ದೊಡ್ಡ ಮಟ್ಟದಲ್ಲಿ ಬೆಳೆಯುವ ಎಲ್ಲ ಅವಕಾಶಗಳಿರುವ ಪಡುಬಿದ್ರಿಗೆ “ಹೆದ್ದಾರಿ’ಯೇ “ಗೋಳು’ ಎಂಬಂತಾಗಿದೆ. ಮಂಗಳೂರು-ಉಡುಪಿ- ಕಾರ್ಕಳ ಒಂದುಗೂಡಿಸುವ ಬಹುಮುಖ್ಯ ಕೇಂದ್ರವಾದ ಪಡುಬಿದ್ರಿ ದೂರದೃಷ್ಟಿ ಇಲ್ಲದ ಯೋಜನೆಗ ಳಿಂದ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಹೆದ್ದಾರಿಗೆ ಸಿಗ್ನಲ್‌ ದೀಪ ಅಳವಡಿಸಲು ಇರುವ ಕಾನೂನುರೀತ್ಯಾ ಅಡ್ಡಿ ಆತಂಕ ಜನರಿಗೆ ಮುಳುವಾಗಿವೆ.

Advertisement

ಚತುಷ್ಪಥ ಹೆದ್ದಾರಿಯಾಗಿ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗೊಂಡಾಗ ಕರಾವಳಿಯ ಎರಡೂ ಜಿಲ್ಲೆಗಳ ಎಲ್ಲ ಕಡೆ ಅದು 60 ಮೀಟರ್‌ ಅಗಲ ಇದ್ದರೆ ಪಡುಬಿದ್ರಿಯಲ್ಲಿ ಮಾತ್ರ 45 ಮೀಟರ್‌ಗೆ ಸೀಮಿತವಾಗಿದೆ. ಹಾಗಾಗಿ ಇಲ್ಲಿನ ಹೆದ್ದಾರಿ ಸಹಿತ ಡಿವೈಡರ್‌ ಮತ್ತು ಸರ್ವೀಸ್‌ ರಸ್ತೆ ಅಗಲ ಕಿರಿದಾಗಿದೆ. ಸರ್ವೀಸ್‌ ರಸ್ತೆಯಲ್ಲಿ ಬಸ್ಸುಗಳ ಸಂಚಾರದಿಂದಾಗಿ ಪಾದಚಾರಿಗಳಿಗೆ ನಡೆದಾಡಲೂ ಭಯ ಕಾಡುತ್ತದೆ.

ಕೆಲ ಖಾಸಗಿ ಕಾರುಗಳು, ದ್ವಿಚಕ್ರ ವಾಹನ ಸರ್ವೀಸ್‌ ರಸ್ತೆಯಲ್ಲೇ ನಿತ್ಯ ಪಾರ್ಕಿಂಗ್‌ ಮಾಡುತ್ತಿರುವುದರಿಂದ ರಸ್ತೆ ತಡೆ, ವಾಹನ
ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಪಡುಬಿದ್ರಿಯ ಜಂಕ್ಷನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ  ಆರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಕಳೆದೊಂದು ವರ್ಷದಲ್ಲೇ ಸುಮಾರು 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹೊರ ವಲಯ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಗೊಳ್ಳುತ್ತಿರುವಾಗ ಪೇಟೆಯಲ್ಲಿ ವಾಹನ ಸಂಚಾರಗಳ ಒತ್ತಡವೂ ಮುಂದಿನ ದಿನಗಳಲ್ಲಿ ಅಪರಿಮಿತ ವೆನಿಸಲಿದೆ. ಈಗಿಂದೀಗಲೇ ಈ ಕುರಿತ ದೂರದೃಷ್ಟಿಯ ಯೋಜನೆ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಇದರ ಶಾಶ್ವತ ಪರಿಹಾರಕ್ಕೆ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಉನ್ನತಾಧಿಕಾರಿ ಗಳಿಗೆ ವರದಿ ನೀಡುತ್ತಲೇ ಬಂದಿದ್ದಾರೆ.

ಪಡುಬಿದ್ರಿಯ ಸಂಚಾರ ಸಮಸ್ಯೆ
*ನಿತ್ಯ 200ಕ್ಕೂ ಹೆಚ್ಚು ಬಸ್‌ಗಳು ಪಡುಬಿದ್ರಿಯಲ್ಲಿ ನಿಂತು ಚಲಿಸುತ್ತದೆ. ಸರಕಾರಿ ಬಸ್ಸುಗಳಿಗೆ ಇಲ್ಲಿ ಅವಕಾಶ ಕಡಿಮೆ.
*ಇಲ್ಲಿರುವ ಯಾವುದೇ ಬಸ್ಸು ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸಿಲ್ಲ.
* ಮಂಗಳೂರು-ಉಡುಪಿ ಮಧ್ಯೆ ಸಂಚರಿಸುವ ಎಲ್ಲಾ ಬಸ್ಸುಗಳು ಸರ್ವಿಸ್‌ ರಸ್ತೆ ಬಳಸಿ ಬಸ್ಸು ನಿಲ್ದಾಣಕ್ಕೆ ಬರಬೇಕು ಎಂಬ ನಿಯಮವಿದೆ. ಅದರೆ ಶೇ. 40ರಷ್ಟು ಬಸ್ಸುಗಳು ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತದೆ.
* ಹಲವು ಕೈಗಾರಿಕೆಗಳು, ಸಣ್ಣ ಉದ್ಯಮಗಳಿರುವ ಪಡುಬಿದ್ರಿ ಕಾರ್ಮಿಕರಿಂದ ಗಿಜಿಗುಡುತ್ತದೆ.

ಮೂಲ ಸೌಕರ್ಯ ಅಗತ್ಯ
ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಪಡುಬಿದ್ರಿಯಲ್ಲಿನ ಮೂಲ ಬಸ್‌ ನಿಲ್ದಾಣ ಅಸ್ತಿತ್ವ ಕಳೆದುಕೊಂಡಿತ್ತು. ಸದ್ಯ ಹೆದ್ದಾರಿಯಿಂದಾಗಿ ಸೀಳಲ್ಪಟ್ಟಿರುವ ಪಡುಬಿದ್ರಿಯ 3 ಕಡೆಗಳಲ್ಲಿ ಪಡುಬಿದ್ರಿ ಗ್ರಾ.ಪಂ. ಸಾರ್ವಜನಿಕ ಸಹಭಾಗಿತ್ವದೊಂದಿಗೆ
3 ಬಸ್‌ ನಿಲ್ದಾಣ ನಿರ್ಮಿಸಿದೆ.
* ಪಡುಬಿದ್ರಿ-ಮಂಗಳೂರು ಬಸ್‌ ನಿಲ್ದಾಣ ಹೊರತುಪಡಿಸಿ ಯಾವುದೇ ನಿಲ್ದಾಣದಲ್ಲಿ ಮೂಲ  ಸೌಕರ್ಯಗಳಿಲ್ಲ. ಒದಗಿಸಲು ಸ್ಥಳಾವಕಾಶವೂ ಇಲ್ಲ.
* ಕಾರ್ಕಳ ರಸ್ತೆ ಬಸ್‌ ನಿಲ್ದಾಣದ ಬಳಿ ಇರುವ ಅಲ್ಪ ಸ್ಥಳಾವಕಾಶದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಪಡುಬಿದ್ರಿ ಪಂಚಾಯತ್‌ 7ಲ. ರೂ. ಗಳ ಕ್ರಿಯಾ ಯೋಜನೆ ರೂಪಿಸಿದ್ದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ.

Advertisement

ಆರಾಮ

Advertisement

Udayavani is now on Telegram. Click here to join our channel and stay updated with the latest news.

Next