ಬೆಂಗಳೂರು: ದಟ್ಟ ಮೀಸಲು ಅರಣ್ಯ, ದಾಂಡೇಲಿ ವನ್ಯಜೀವಿಧಾಮ, ಆನೆ ಹಾಗೂ ಹುಲಿ ಮೀಸಲು ಪ್ರದೇಶದ ಮೂಲಕ ಹಾದು ಹೋಗುವ ಬೆಳಗಾವಿ-ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ-4ಎ ವಿಸ್ತರಣೆ ಕಾಮಗಾರಿಗೆ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶುಕ್ರವಾರ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಪರಿಸರವಾದಿ ಸುರೇಶ್ ಹೆಬ್ಳಿಕರ್ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಳಗಾವಿಯ ಅಸಿಸ್ಟೆrಂಟ್ ಕಮಿಷನರ್‌ಗೆ ನೋಟಿಸ್ ಜಾರಿಗೆ ಆದೇಶಿಸಿ, ವಿಚಾರಣೆಯನ್ನು ಮಾರ್ಚ್‌ಗೆ ಮುಂದೂಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ.ಆರ್.ಮೋಹನ್, ರಾಷ್ಟ್ರೀಯ ಹೆದ್ದಾರಿ 4ಎ ದಾಂಡೇಲಿಯ ದಟ್ಟ ಅರಣ್ಯದ ನಡುವೆ ಹಾದು ಹೋಗುತ್ತದೆ. ಜತೆಗೆ ದಾಂಡೇಲಿ ವನ್ಯಜೀವಿಧಾಮ, ಆನೆ ಹಾಗೂ ಹುಲಿ ಮೀಸಲು ಪ್ರದೇಶ, ಖಾನಾಪುರ ಬಫರ್ ವಲಯ ಇದೇ ವ್ಯಾಪ್ತಿಯಲ್ಲಿದ್ದು, ಸುಮಾರು 14 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಬೃಹತ್ ಗಾತ್ರದ 22 ಸಾವಿರ ಮರಗಳನ್ನು ಕತ್ತರಿಸಲಾಗಿದೆ.
ಇನ್ನೂ 1 ಲಕ್ಷ ಮರಗಳನ್ನು ಕತ್ತರಿಸುವ ಸಾಧ್ಯತೆ ಇದೆ. ಈ ಕಾಮಗಾರಿಗೆ ನಿಯಮದಂತೆ ವನ್ಯಜೀವಿ ಮಂಡಳಿ ಅನುಮತಿ ಪಡೆದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ರಸ್ತೆ ವಿಸ್ತರಣೆಗಾಗಿ ಶತಮಾನದಷ್ಟು ಹಳೆಯ ಅಪರೂಪದ ಮರಗಳನ್ನು ಕತ್ತರಿಸಲಾಗುತ್ತಿದೆ. ಮರ ಕಡಿದಾಗ ಪರ್ಯಾಯ ಅರಣ್ಯ ಬೆಳೆಸಬೇಕೆಂಬ ನಿಯಮವನ್ನು ಹೆದ್ದಾರಿ ಪ್ರಾಧಿಕಾರ ಉಲ್ಲಂ ಸಿದೆ.
ಮುಖ್ಯವಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ ಅದಕ್ಕೆ ವನ್ಯ ಜೀವಿ ಮಂಡಳಿಯಿಂದ ಅನುಮತಿ ಪಡೆಯಬೇಕು. ಆದರೆ, ಇಲ್ಲಿ ಅನುಮತಿ ಪಡೆಯದೇ ಕಾಮಗಾರಿ ಕೈಗೊಂಡು ಮರಗಳನ್ನು ಕಡಿಯಲಾಗುತ್ತಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟದ ಪರಿಸರಕ್ಕೆ ಹೊಂದಿಕೊಂಡಿರುವ ಅತ್ಯಂತ ಅಪರೂಪದ ಪ್ರಾಣಿ ಮತ್ತು ಪಕ್ಷಿ ಸಂಕುಲ ಹಾಗೂ ದಟ್ಟ ಅರಣ್ಯ ಹೊಂದಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡರೂ ಪ್ರಾಣಿ, ಪಕ್ಷಿಗಳು ಹಾಗೂ ಸಸ್ಯ ಸಂಕುಲಕ್ಕೆ ತೊಂದರೆ ಆಗಲಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಕ್ಕೆ ತಡೆ ನೀಡಬೇಕು. ರಾತ್ರಿ ವೇಳೆ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಮತ್ತು ಹೆದ್ದಾರಿಯಲ್ಲಿ ಪ್ರತಿ 5 ಕಿ.ಮೀ.ಗೆ ಸ್ಪೀಡ್ ಬ್ರೇಕರ್ ನಿರ್ಮಿಸಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.