Advertisement

ನಿರಂತರ ವಿದ್ಯುತ್‌ಗಾಗಿ ಹೆದ್ದಾರಿ ಬಂದ್‌

02:10 PM Oct 05, 2018 | Team Udayavani |

ಗೊರೇಬಾಳ: ತುಂಗಭದ್ರಾ ನದಿ ಪಾತ್ರದ ರೈತರಿಗೆ ನಿರಂತರ ವಿದ್ಯುತ್‌ ಪೂರೈಸಲು ಆಗ್ರಹಿಸಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ತುಂಗಭದ್ರಾ ನದಿ ಪಾತ್ರದ ರೈತರು ಗುರುವಾರ ಸಿಂಧನೂರು ತಾಲೂಕಿನ ದಡೇಸ್ಗೂರು ಹತ್ತಿರ ತುಂಗಭದ್ರಾ ಸೇತುವೆ ಬಳಿ ಸುಮಾರು ಎರಡು ತಾಸಿಗೂ ಅಧಿಕ ಕಾಲ ಹೆದ್ದಾರಿ ತಡೆ ಚಳುವಳಿ ನಡೆಸಿದರು.

Advertisement

ಸುಮಾರು 18 ಗಂಟೆ ನಿರಂತರ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಈಗಾಗಲೇ ಹಲವಾರು ಬಾರಿ ರೈತರು
ಸಚಿವರಿಗೆ ಹಾಗೂ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸದ್ಯ 7 ತಾಸು ಮಾತ್ರ ವಿದ್ಯುತ್‌ ಒದಗಿಸಲಾಗುತ್ತಿದೆ. ಇದರಿಂದ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ನಿರಂತರ 10 ತಾಸು ವಿದ್ಯುತ್‌ ಪೂರೈಕೆ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಈಡೇರದ ಹಿನ್ನೆಲೆಯಲ್ಲಿ ರೈತರು ಗುರುವಾರ ಬೀದಿಗಿಳಿದು ಹೆದ್ದಾರಿ ತಡೆ ನಡೆಸಿದರು.

ರೈತರ ಹೋರಾಟ ಬೆಂಬಲಿಸಿ ಭಾಗವಹಿಸಿದ್ದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ರೈತರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ 24 ಗಂಟೆ ವಿದ್ಯುತ್‌ ಕೊಡುವ ಭರವಸೆ ನೀಡಿತ್ತು. ಆದರೆ ಕನಿಷ್ಠ ವಿದ್ಯುತ್‌ ಒದಗಿಸದೇ ರೈತರನ್ನು ಕಡೆಗಣಿಸುತ್ತಿದೆ. ಕೇವಲ ಒಂದೇ ಒಂದು ವರ್ಷ ರೈತರು ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ದೇಶದ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಾಗಿದೆ.

ಸರ್ಕಾರದ ಯಾವುದೇ ಅನುದಾನವಿಲ್ಲದೇ ರೈತರು ಕೋಟ್ಯಂತರ ರೂ. ಖರ್ಚು ಮಾಡಿ ತುಂಗಭದ್ರಾ ನದಿಗೆ ಏತ ನೀರಾವರಿ ಮಾಡಿಕೊಂಡಿದ್ದಾರೆ. ನದಿ ನೀರು ಪೋಲಾಗುತ್ತಿದ್ದರೂ, ಅದನ್ನು ಬಳಸಿಕೊಳ್ಳಲು ರೈತರಿಗೆ ವಿದ್ಯುತ್‌ ಇಲ್ಲವಾಗಿದೆ. ಪಕ್ಕದ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ರೈತರಿಗೆ ಉಚಿತವಾಗಿ 24 ಗಂಟೆಗಳ ಕಾಲ ವಿದ್ಯುತ್‌ ಒದಗಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಅಶೋಕ ಭೂಪಾಲ ಮಾತನಾಡಿ, ವಿದ್ಯುತ್‌ ಪೂರೈಕೆಯ ನಮ್ಮ ಕೂಗು ಆಳುವ ವರ್ಗಕ್ಕೆ ತಲುಪುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಮಳೆಯಿಲ್ಲದೇ ಬರ ಆವರಿಸಿದೆ. ಪ್ರಸ್ತುತ ತುಂಗಭದ್ರಾ ನದಿ ಪಾತ್ರದಲ್ಲಿ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿದೆ. ಆ ನೀರನ್ನು ಬಳಸಿಕೊಂಡು ನೀರಾವರಿ ಮಾಡಿಕೊಳ್ಳಲು ವಿದ್ಯುತ್‌ ಅಭಾವ ಉಂಟಾಗಿದೆ. ಕನಿಷ್ಠ 18 ಗಂಟೆಗಳ ಕಾಲವಾದರೂ ವಿದ್ಯುತ್‌ ಒದಗಿಸಬೇಕು ಎಂದು ಹಲವು ಹಂತದ ಹೋರಾಟ ನಡೆಸಿದ್ದರೂ ಸ್ಪಂದಿಸದ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

Advertisement

ರೈತರ ಮನವೊಲಿಕೆಗೆ ಹರಸಾಹಸ: ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ರಾಯಚೂರು ಅಧೀಕ್ಷಕ ಅಭಿಯಂತರ ವಿಜಯಕುಮಾರ ಹಾಗೂ ಎಇಇ ಚಂದ್ರಶೇಖರ ದೇಸಾಯಿ ರೈತರ ಮನವೊಲಿಸಲು ಹರಸಾಹಸ ಪಟ್ಟರು. ಈ ಹಿಂದೆ ಭರವಸೆ ನೀಡಿದಂತೆ 10 ಗಂಟೆ ವಿದ್ಯುತ್‌ ಕೊಡುವುದಾಗಿ ಭರವಸೆ ನೀಡಿದ್ದರೂ ರೈತರು ಕನಿಷ್ಠ 12 ಗಂಟೆಗಳ ಕಾಲ ವಿದ್ಯುತ್‌ ಪೂರೈಸಬೇಕು. ಜೊತೆಗೆ ಡಿಸೆಂಬರ್‌ ಅಂತ್ಯದವರೆಗೂ ವಿದ್ಯುತ್‌ ನೀಡಬೇಕು ಎಂದು ಬೇಡಿಕೆಗಳನ್ನಿಟ್ಟರು. ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು ಬಳ್ಳಾರಿ ಜೆಸ್ಕಾಂ ಮುಖ್ಯ ಅಭಿಯಂತರರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರೂ ಸಹ ಮುಖ್ಯ ಅಭಿಯಂತರೊಂದಿಗೆ ಚರ್ಚಿಸಿದರು. ಆಗ ಡಿಸೆಂಬರ್‌ ಅಂತ್ಯದವರೆಗೆ ಪ್ರತಿನಿತ್ಯ 11 ಗಂಟೆಗಳ ಕಾಲ ವಿದ್ಯುತ್‌ ನೀಡುವ ಭರವಸೆ ನೀಡಿದ ನಂತರವೇ ರೈತರು ಹೋರಾಟ ಹಿಂಪಡೆದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಬಸವರಾಜ ಉಪ್ಪಳ, ಸರ್ವೋತ್ತಮ ರೆಡ್ಡಿ ಹುಡಾ, ಖಾಸೀಮ್‌ಸಾಬ್‌ ದಡೇಸ್ಗೂರು,
ಶಂಕ್ರಗೌಡ ಸಿಂಗಾಪುರ, ಲಂಕೆಪ್ಪ ಸಿಂಗಾಪುರ, ಚಂದ್ರಶೇಖರ ಉಪ್ಪಳ, ಶರಣಗೌಡ ಸಿರಗುಪ್ಪಾ, ನಾಗರಾಜ, ಬುಜ್ಜಿಬಾಬು, ನಾಗರಾಜ ಸಿರಗುಪ್ಪಾ, ಬೇವೂರು ಬಸವರಾಜಗೌಡ, ಜೆ.ಸಿದ್ದರಾಮನಗೌಡ ಸೇರಿದಂತೆ ಐದು ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್: ರೈತ ಹೋರಾಟದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ಭದ್ರತೆ ಹಾಕಲಾಗಿತ್ತು. ಡಿವೈಎಸ್‌ಪಿ ಎಸ್‌.ಜಿ.ಸುಬೇದಾರ ನೇತೃತ್ವದಲ್ಲಿ ಸಿಂಧನೂರು, ಮಾನ್ವಿ, ಸಿರಗುಪ್ಪಾ ಸಿಪಿಐಗಳು, ಅನೇಕ ಪಿಎಸ್‌ಐಗಳ ಸೇರಿದಂತೆ ನೂರಾರು ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next