ಅಫಜಲಪುರ: ಕಬ್ಬಿನ ಮೇಲೆ ಪ್ರತಿ ಕ್ವಿಂಟಲ್‌ಗೆ ಕೇವಲ 15ರೂ., ಟನ್‌ಗೆ 3050ರೂ. ಏರಿಕೆ ಮಾಡುವ ಮೂಲಕ ಅವೈಜ್ಞಾನಿಕ ಬೆಲೆ ನಿಗದಿ ಪಡಿಸಿದ್ದನ್ನು ಖಂಡಿಸಿ ತಾಲೂಕು ಕಬ್ಬು ಬೆಳೆಗಾರರ ಸಂಘದವರು ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ರಮೇಶ ಹೂಗಾರ, ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 3050ರೂ. ಬೆಲೆ ನಿಗದಿ ಮಾಡಿದ್ದು ಸರಿಯಲ್ಲ. ಕೂಡಲೇ ಇದನ್ನು ಹಿಂಪಡೆದು ರೈತರೊಂದಿಗೆ ಚರ್ಚಿಸಿ ನ್ಯಾಯಯುತವಾಗಿ ಎಫ್ ಆರ್‌ಪಿ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ಬೆಳೆ ಹಾಳಾಗಿದೆ. ಕೂಡಲೇ ಪರಿಹಾರ ನೀಡಬೇಕು. ಸಹಕಾರಿ ಸಂಘಗಳಲ್ಲಿ ಸಾಲ ಸೌಲಭ್ಯ ನೀಡುತ್ತಿಲ್ಲ. ಕೂಡಲೇ ಸಾಲ ಮನ್ನಾ ಮಾಡುವುದರ ಜೊತೆಗೆ ಹೊಸ ಸಾಲ ನೀಡಬೇಕು. ಹೊಲಗಳಲ್ಲಿರುವ ರೈತರ ಮನೆಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ತಹಶೀಲ್ದಾರ್ ಸಂಜಿವಕುಮಾರ ದಾಸರ್ ಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಉದ್ಯಮಿಗಳ 9.60 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲಾಗುತ್ತಿಲ್ಲ. ಇದನ್ನು ನೋಡಿದಾಗ ಇದು ರೈತರ ಪರ, ಜನರ ಪರವಾದ ಸರ್ಕಾರವಲ್ಲ ಎನ್ನುವ ಭಾವನೆ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಲಕ್ಷ್ಮೀಪುತ್ರ ಮನಮಿ, ಮಲ್ಲು ಬಳೂರ್ಗಿ, ಶೇಖರಗೌಡ ಪಾಟೀಲ್ ಆನೂರ, ಮಹಾದೇವಪ್ಪ ಶೇರಿಕಾರ, ಶರಣಗೌಡ ಪಾಟೀಲ್, ಬಸವರಾಜ ಹಳಿಮನಿ, ಭಾಗಣ್ಣ ಕುಮಬಾರ, ಬಸು ಪಾಟೀಲ್, ಧರೇಪ್ಪ ಡಾಂಗೆ, ಸಿದ್ಧು ಪೂಜಾರಿ, ಅಂಬಾಜಿ ತೆನ್ನಳ್ಳಿ, ಬಸವರಾಜ ವಾಳಿ, ಧಾನು ನೂಲಾ, ಸಿದ್ಧು ಸೋಮಜಾಳ, ಗುರು ಜಮಾದಾರ ಮತ್ತಿತರರು ಇದ್ದರು.