ಶಹಾಪುರ: ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಇಲ್ಲಿನ ರೈತ ಕಾರ್ಮಿಕ ಸಂಯುಕ್ತ ಹೋರಾಟ ಸಮಿತಿ ನಗರದ ತಹಸೀಲ್ ಕಚೇರಿ ಬಳಿ ಒಂದು ತಾಸಿಗೂ ಹೆಚ್ಚು ಕಾಲ ಬೀದರ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.
ಪ್ರಧಾನಿ ಮೋದಿ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾ ರೈತರಿಂದ ಘೋಷಣೆಗಳು ಮೊಳಗಿದವು. ಅಲ್ಲದೆ ರಸ್ತೆ ತಡೆಯಿಂದ ಸರ್ಕಾರಿ ಬಸ್‌ಗಳು ಸೇರಿದಂತೆ ಖಾಸಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಟಿಪ್ಪರ್, ಲಾರಿ, ಬಸ್ ಗಳು ಸೇರಿದಂತೆ ದ್ವಿಚಕ್ರ ವಾಹನಗಳ ಸವಾರರಿಗೆ ಮತ್ತು ಆಟೋಗಳಿಗೆ ಸುಮಾರು ಒಂದು ತಾಸು ಕಾಲ ತೊಂದರೆಯುಂಟಾಯಿತು.
ಈ ನಡುವೆ ಅಂಬ್ಯುಲೆನ್ಸ್ ವಾಹನ ಸೇರಿದಂತೆ ಆರೋಗ್ಯ ತುರ್ತು ವಾಹನಗಳಿಗೆ ಪೊಲೀಸರು ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪ್ರತಿಭಟನಾ ನೇತೃತ್ವ ವಹಿಸಿದ್ದ ರೈತ ಮುಖಂಡ ಚನ್ನಪ್ಪ ಆನೇಗುಂದಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ರೈತಪರ ಸರ್ಕಾರ ಎಂದು ಜಂಬಕೊಚ್ಚಿಕೊಳ್ಳವ ಬಿಜೆಪಿ ರೈತರಿಗೆ ಹಿಂಬದಿಯಿಂದ ಚೂರಿ ಹಾಕಿದೆ. ಪ್ರಧಾನಿ ಮೋದಿಯವರು, ರೈತಪರ ಕಾಳಜಿ ಹೊಂದಿದ್ದಲ್ಲಿ ಈ ಕೂಡಲೇ ತಿದ್ದುಪಡಿ ತಂದಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಅಗತ್ಯ
ಮುಖಂಡರಾದ ಎಸ್.ಎಂ. ಸಾಗರ, ಶರಣು ಮಂದರವಾಡ, ನಾಗರತ್ನ ಪಾಟೀಲ್, ಚಂದ್ರಕಲಾ, ಮಲಕಣ್ಣ ಚಿಂತಿ ಸೇರಿದಂತೆ ರೈತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು