Advertisement

ಅನ್ನದಾತರಿಂದ ಹೆದ್ದಾರಿ ತಡೆ

07:54 AM Jun 11, 2019 | Team Udayavani |

ಹಾವೇರಿ: ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿ ರೈತರು ಸೋಮವಾರ ಇಲ್ಲಿಯ ದೇವಗಿರಿ ಕ್ರಾಸ್‌ ಬಳಿ ಅರ್ಧ ತಾಸು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.

Advertisement

ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರು ಘೋಷಣೆ ಕೂಗಿದರು. ಜಿಂದಾಲ್ ಕಂಪನಿಗೆ ಭೂಮಿ ನೀಡುವ ಸರ್ಕಾರದ ನಿರ್ಧಾರವನ್ನೂ ತೀವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ರೈತರಿಗೆ ಮರಣ ಶಾಸನದಂತಾಗಿದೆ. ಇದು ಅಪ್ಪಟ ರೈತ ವಿರೋಧಿಯಾಗಿದೆ. ರೈತರ ಭೂಮಿಯನ್ನು ಸರ್ಕಾರದ ಅಭಿವೃದ್ಧಿ ಕೆಲಸಕ್ಕೆ ಉಪಯೋಗಿಸಬಹುದು. ಆದರೆ, ಡಿನೋಟಿಫಿಕೇಶನ್‌ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವುದಕ್ಕೆ ತಮ್ಮ ವಿರೋಧವಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ತಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಆದರೆ, ರೈತರ ನಿಜವಾದ ಸಂಕಷ್ಟದ ಅರಿವು ಅವರಿಗಿಲ್ಲ. ಅವರು ಖಾಸಗಿ ಕಂಪನಿಗಳಿಗೆ ಕೇವಲ ಒಂದು ಲಕ್ಷ ರೂಗಳಿಗೆ ಒಂದು ಎಕರೆಯಂತೆ ಭೂಮಿ ಕೊಡುವುದಾದರೆ ಅವರ ವೈಯಕ್ತಿಕ ಭೂಮಿ ಕೊಡಲಿ. ಸಣ್ಣ ರೈತರ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಿಲ್ಲಿಸಲಿ. ಮುಖ್ಯಮಂತ್ರಿಯವರು ರಾಜ್ಯದ ದಕ್ಷಿಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ಸ್ಥಿತಿ ಮುಂದುವರೆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಲು ಮುಖ್ಯಮಂತ್ರಿಗಳೇ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಸಾರ್ವಜನಿಕ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ನಾಲ್ಕು ಪಟ್ಟು ಬೆಲೆ ನೀಡಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಉದ್ದೇಶಿತ ಯೋಜನೆಗೆ ತಕ್ಷಣ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಆ ಭೂಮಿಯನ್ನು ಐದು ವರ್ಷಗಳಲ್ಲಿ ಯಾವ ರೈತನಿಂದ ಪಡೆದುಕೊಳ್ಳುತ್ತಾರೋ ಅವರಿಗೆ ಮರಳಿ ನೀಡಬೇಕು. ಕೇಂದ್ರ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವ ಮೂಲಕ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿರುವುದು ಖಂಡನೀಯ ಎಂದರು. ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ವಶಪಡಿಸಿಕೊಂಡಿರುವ ರೈತರ ಭೂಮಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ, ಕೂಡಲೇ ರೈತರಿಗೆ ಪರಿಹಾರ ಕೊಡಬೇಕು. ಜೊತೆಗೆ ಸಮ್ಮಿಶ್ರ ಸರ್ಕಾರ ತಿದ್ದುಪಡಿಯನ್ನು ಮರಳಿ ಪಡೆಯಬೇಕು. ಜಿಲ್ಲೆಯಲ್ಲಿ ಆವರಿಸಿರುವ ಬರ ನಿರ್ವಹಣೆ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು. ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಜನ, ಜಾನುವಾರುಗಳಿಗೆ ನೀರು ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಿ ಹಾಗೂ ಎಸ್ಪಿ ಕೆ. ಪರಶುರಾಮ್‌ ಅವರ ಮೂಲಕ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಎಲ್.ಎನ್‌. ನಾಯಕ, ದೀಪಕ ಗಂಟಿಸಿದ್ದಪ್ಪನವರ, ಹಾಸಿಂ ಜಿಗಳೂರು, ಚನ್ನಪ್ಪ ಮರಡೂರ, ಮಂಜಣ್ಣ ಮುದಿಯಪ್ಪನವರ, ರುದ್ರಪ್ಪ ಬಳಿಗಾರ, ಬಸವರಾಜ ತಳವಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next