Advertisement

ಪೊಲೀಸರ ಕಾರ್ಯ ವೈಖರಿಗೆ ಹೈ ಬೇಸರ 

12:01 PM Apr 14, 2018 | Team Udayavani |

ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಎಚ್‌ಐವಿ ಸೋಂಕು ಹರಡಲು ಕಾರಣವಾಗಿದ್ದಾರೆ ಎಂಬ ಆರೋಪ ಸಂಬಂಧ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯಲ್ಲಿ ವಿಳಂಬ ಅನುಸರಿಸಿದ ಸದಾಶಿವನಗರ ಠಾಣೆ ಪೊಲೀಸರ ಕಾರ್ಯವೈಖರಿಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಪೊಲೀಸ್‌ ತನಿಖೆಯ ಕ್ರಮ ಪ್ರಶ್ನಿಸಿ 45 ವರ್ಷದ ಎಚ್‌ಐವಿ ಬಾಧಿತ ಮಹಿಳೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಎಸ್‌.ಚೌಹಾಣ್‌ ಅವರಿದ್ದ ಏಕಸದಸ್ಯ ಪೀಠ, ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೊಲೀಸರ ಕಾರ್ಯಕ್ಷಮತೆ ಬಗ್ಗೆ  ಮೆಚ್ಚುಗೆಯಿತ್ತು. ಆದರೆ, ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಗಮನಿಸಿದರೆ ಪರಿಸ್ಥಿತಿ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿಲ್ಲ ಎಂದೆನಿಸುತ್ತದೆ ಎಂದರು.

ಮಹಿಳೆ ದೂರು ನೀಡಿದ ಬಳಿಕ ನಿಸ್ಪಕ್ಷಪಾತ ತನಿಖೆ ನಡೆಸುವುದು ಪೊಲೀಸರ ಕರ್ತವ್ಯ. ಆದರೆ, ಎಫ್ಐಆರ್‌ ದಾಖಲಿಸಿಕೊಳ್ಳಲು ವಿಳಂಬ ಮಾಡಿರುವ ಕ್ರಮ ಸರಿಯಲ್ಲ. ಕೂಡಲೇ ಈ ಪ್ರಕರಣದಲ್ಲಿ ತನಿಖೆ ಚುರುಕುಕೊಳಿಸಿ ಕಾಲ ಕಾಲಕ್ಕೆ ವರದಿ ಸಲ್ಲಿಸುವಂತೆ  ಸದಾಶಿವನಗರ ಇನ್ಸ್‌ಪೆಕ್ಟರ್‌ಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಏ. 25ಕ್ಕೆ ಮುಂದೂಡಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜಿದಾರ ಮಹಿಳೆ 2013ರ ಅಕ್ಟೋಬರ್‌ನಲ್ಲಿ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ  ಹೊರ ರೋಗಿಯಾಗಿ ದಾಖಲಾಗಿದ್ದರು. ಚಿಕಿತ್ಸೆ ಸಮಯದಲ್ಲಿ ರಕ್ತ ನೀಡಿದಾಗ ಎಚ್‌ಐವಿ ಸೋಂಕಿರುವ ರಕ್ತ ಸೇರಿಕೊಂಡಿದ್ದು, ರಕ್ತ ಪರೀಕ್ಷೆ ಸಂದರ್ಭದಲ್ಲಿ ಎಚ್‌ಐವಿ ಪಾಸಿಟವ್‌ ಎಂದು ವರದಿ ಬಂದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಸದಾಶಿವನಗರ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರೂ ಅದನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ 2016ರಲ್ಲಿ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next