Advertisement

ಸಣ್ಣ ಮೊತ್ತದ ಟಿ20: ಲಂಕೆಗೆ ಜಯ

06:00 AM Aug 16, 2018 | |

ಕೊಲಂಬೊ: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಟಿ20 ಪಂದ್ಯವನ್ನು ಶ್ರೀಲಂಕಾ 3 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಹರಿಣಗಳ ಪಡೆಯ ದ್ವೀಪ ರಾಷ್ಟ್ರದ ಕ್ರಿಕೆಟ್‌ ಪ್ರವಾಸ ಅಂತ್ಯಗೊಂಡಿದೆ. ಮಂಗಳವಾರ ರಾತ್ರಿ ನಡೆದ ಸಣ್ಣ ಮೊತ್ತದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 16.4 ಓವರ್‌ಗಳಲ್ಲಿ ಕೇವಲ 98 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಶ್ರೀಲಂಕಾ ಕೂಡ ಕುಸಿತ ಕಂಡಿತಾದರೂ ಅಂತಿಮವಾಗಿ 16 ಓವರ್‌ಗಳಲ್ಲಿ 7 ವಿಕೆಟಿಗೆ 99 ರನ್‌ ಮಾಡಿ ಜಯ ಸಾಧಿಸಿತು. ಟೆಸ್ಟ್‌ ಸರಣಿಯನ್ನು 2-0 ಅಂತರದಿಂದ ಕಳೆದು ಕೊಂಡಿದ್ದ ದಕ್ಷಿಣ ಆಫ್ರಿಕಾ, ಬಳಿಕ ಏಕದಿನದಲ್ಲಿ ತಿರುಗಿ ಬಿದ್ದು 3-2ರಿಂದ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

Advertisement

ದಕ್ಷಿಣ ಆಫ್ರಿಕಾ ಕನಿಷ್ಠ ರನ್‌
ಲಂಕೆಯ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫ‌ಲವಾದ ದಕ್ಷಿಣ ಆಫ್ರಿಕಾ ತನ್ನ ಟಿ20 ಚರಿತ್ರೆಯಲ್ಲೇ ಅತೀ ಸಣ್ಣ ಮೊತ್ತಕ್ಕೆ ಕುಸಿಯಿತು. 2013ರ ಪಾಕಿಸ್ಥಾನ ಎದುರಿನ ಪಂದ್ಯದಲ್ಲಿ 100 ರನ್ನಿಗೆ ಆಲೌಟ್‌ ಆದದ್ದು ಆಫ್ರಿಕಾದ ಹಿಂದಿನ ಕನಿಷ್ಠ ಗಳಿಕೆಯಾಗಿತ್ತು. ಶ್ರೀಲಂಕಾ ಪರ ದಾಳಿಗಿಳಿದ ಐದೂ ಬೌಲರ್‌ಗಳು ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾದರು. ಲಕ್ಷಣ ಸಂದಕನ್‌ 19ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಧನಂಜಯ ಡಿ’ಸಿಲ್ವ ಮತ್ತು ಅಖೀಲ ಧನಂಜಯ ತಲಾ 2 ವಿಕೆಟ್‌ ಹಾರಿಸಿದರು. ಆಫ್ರಿಕಾ ಪರ 20 ರನ್‌ ಮಾಡಿದ ಕ್ವಿಂಟನ್‌ ಡಿ ಕಾಕ್‌ ಅವರದೇ ಹೆಚ್ಚಿನ ಗಳಿಕೆ. 

ಶ್ರೀಲಂಕಾ ಮೊದಲ ಓವರಿನಲ್ಲೇ ಆರಂಭಿಕರನ್ನು ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ರಬಾಡ ಈ ವಿಕೆಟ್‌ಗಳನ್ನು ಕಿತ್ತು ಆತಿಥೇಯರಿಗೆ ಅಪಾಯದ ಮುನ್ಸೂಚನೆ ನೀಡಿದರು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಚಂಡಿಮಾಲ್‌ (ಅಜೇಯ 36) ಮತ್ತು ಧನಂಜಯ ಡಿ’ಸಿಲ್ವ (31) 53 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಹಳಿಗೆ ತಂದರು. ಇಲ್ಲಿಂದ ಮುಂದೆ ಇನ್ನೊಂದು ಹಂತದ ಕುಸಿತ ಅನುಭವಿಸಿದ ಲಂಕಾ 88 ರನ್ನಿಗೆ 7 ವಿಕೆಟ್‌ ಉದುರಿಸಿಕೊಂಡಿತು. ಆದರೆ ಚಂಡಿಮಾಲ್‌ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ತಂಡ ಸೋಲಿನ ದವಡೆಯಿಂದ ಪಾರಾಯಿತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-16.4 ಓವರ್‌ಗಳಲ್ಲಿ 98 (ಡಿ ಕಾಕ್‌ 20, ಹೆಂಡ್ರಿಕ್ಸ್‌ 19, ಕ್ಲಾಸೆನ್‌ 18, ಸಂದಕನ್‌ 19ಕ್ಕೆ 3, ಅಖೀಲ ಧನಂಜಯ 15ಕ್ಕೆ 2, ಡಿ’ಸಿಲ್ವ 22ಕ್ಕೆ 2). ಶ್ರೀಲಂಕಾ-16 ಓವರ್‌ಗಳಲ್ಲಿ 7 ವಿಕೆಟಿಗೆ 99 (ಚಂಡಿಮಾಲ್‌ ಔಟಾಗದೆ 36, ಡಿ’ಸಿಲ್ವ 31, ಸಂದಕನ್‌ 16). ಪಂದ್ಯಶ್ರೇಷ್ಠ: ಧನಂಜಯ ಡಿ’ಸಿಲ್ವ.

Advertisement

Udayavani is now on Telegram. Click here to join our channel and stay updated with the latest news.

Next