Advertisement

ದ್ವಿತೀಯ ಸ್ಥಾನಕ್ಕೆ ಜಾರಿದ ವಿರಾಟ್‌ ಕೊಹ್ಲಿ

06:55 AM Aug 12, 2018 | Team Udayavani |

ಲಂಡನ್‌: ಹಲವು ದಾಖಲೆಗಳ ವೀರ ವಿರಾಟ್‌ ಕೊಹ್ಲಿ ಅವರು 2018ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಪೇರಿಸಿದ ಸಾಧಕರಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಅವರು ಈ ವರ್ಷ 1,404 ರನ್‌ ಪೇರಿಸಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ನ ದ್ವಿತೀಯ ದಿನ 23 ರನ್‌ ಗಳಿಸುವ ಮೂಲಕ ಅವರು ಜಾನಿ ಬೇರ್‌ಸ್ಟೊ  (1,389) ಸಾಧನೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಆದರೆ ಮೂರನೇ ದಿನವಾದ ಶನಿವಾರ ಬೇರ್‌ಸ್ಟೊ ಭರ್ಜರಿ ಆಟವಾಡಿ ಕೊಹ್ಲಿಯನ್ನು ಮತ್ತೆ ದ್ವಿತೀಯ ಸ್ಥಾನಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದರು. 

Advertisement

ಶತಕದತ್ತ ದಾಪುಗಾಲು ಹಾಕುತ್ತಿದ್ದ ಬೇರ್‌ಸ್ಟೊ 93 ರನ್‌ ಗಳಿಸಿ ಪಾಂಡ್ಯ ಅವರಿಗೆ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ಅವರು ಈ ವರ್ಷ ಒಟ್ಟಾರೆ 1,482 ರನ್‌ ಪೇರಿಸಿದಂತಾಯಿತು. ಅಂದರೆ ಕೊಹ್ಲಿ ಅವರಿಗಿಂತ 78 ರನ್‌ ಹೆಚ್ಚು. 
ಭಾರತದ ಇನ್ನೋರ್ವ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅಗ್ರ ಐವರೊಳಗಿನ ಸ್ಥಾನ ಪಡೆದಿದ್ದಾರೆ. ಕಳಪೆ ಫಾರ್ಮ್
ನಿಂದಾಗಿ ಲಾರ್ಡ್ಸ್‌ ಟೆಸ್ಟ್‌ ತಂಡದಿಂದ ಕೈಬಿಟ್ಟಿರುವ ಧವನ್‌ 1,055 ರನ್‌ ಪೇರಿಸಿದ್ದಾರೆ. ಗರಿಷ್ಠ ರನ್‌ ಸಾಧಕರ ಪಟ್ಟಿಯ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಇದ್ದಾರೆ. ಎಜ್‌ಬಾಸ್ಟನ್‌ ಟೆಸ್ಟ್‌ನಲ್ಲಿ 80 ಮ ತ್ತು 14 ರನ್‌ ಗಳಿಸಿದ್ದ ರೂಟ್‌ ಈ ವರ್ಷ 1,338 ರನ್‌ ಗಳಿಸಿದ್ದಾರೆ.

ಜಮಾನ್‌ಗೆ ನಾಲ್ಕನೇ ಸ್ಥಾನ
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಸುದ್ದಿ ಮಾಡಿರುವ ಪಾಕಿಸ್ಥಾನದ ಫ‌ಖಾರ್‌ ಜಮಾನ್‌ ಈ ವರ್ಷ 1,181 ರನ್‌ ಪೇರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಕದಿನದಲ್ಲಿ ದ್ವಿಶತಕ ಬಾರಿಸಿದ ಪಾಕಿಸ್ಥಾನ ಮೊದಲ ಆಟಗಾರ ಎಂಬ ಗೌರವಕ್ಕೆ ಜಮಾನ್‌ ಪಾತ್ರರಾಗಿದ್ದರು.
ಗರಿಷ್ಠ ರನ್‌ ಗಳಿಸಿದ ಶ್ರೇಷ್ಠ 10ರಲ್ಲಿ ಭಾರತದ ಇತರ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ. 841 ರನ್‌ ಹೊಡೆದಿರುವ ರೋಹಿತ್‌ ಶರ್ಮ 11ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next