Advertisement

ಹೊಸನಗರದಲ್ಲಿ ಅತ್ಯಧಿಕ ಮಳೆ

02:54 PM May 19, 2022 | Niyatha Bhat |

ಶಿವಮೊಗ್ಗ: ಚಂಡಮಾರುತ, ಸುಳಿಗಾಳಿಯ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕಳೆದ ಮೂರು ದಿನದಿಂದ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರಿಸುತ್ತಿದ್ದು, ಬುಧವಾರ ಕೂಡ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯಿತು.

Advertisement

ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 8.39 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 7.40 ಮಿ.ಮೀ, ಭದ್ರಾವತಿಯಲ್ಲಿ 14.60 ಮಿ.ಮೀ, ತೀರ್ಥಹಳ್ಳಿಯಲ್ಲಿ 9.20 ಮಿ.ಮೀ, ಸಾಗರದಲ್ಲಿ 1.20 ಮಿ.ಮೀ, ಶಿಕಾರಿಪುರದಲ್ಲಿ 4 ಮಿ.ಮೀ, ಸೊರಬದಲ್ಲಿ 2.30 ಮಿ.ಮೀ, ಹೊಸನಗರದಲ್ಲಿ 19.80 ಮಿ.ಮೀ ಮಳೆಯಾಗಿದೆ. ಸುಳಿಗಾಳಿಯಿಂದಾಗಿ ಕಳೆದ ಮೂರು ದಿನದಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಮೂರು ದಿನ ಮಳೆಯಾಗಿದೆ. ಮೇ 16ರಂದು ಜಿಲ್ಲೆಯಲ್ಲಿ 60 ಮಿ.ಮೀ ಮಳೆಯಾಗಿತ್ತು. ಮೇ 17ರಂದು ಮಳೆ ಪ್ರಮಾಣ ತಗ್ಗಿತ್ತು. ಇವತ್ತು ಪುನಃ ಮಳೆಯಾಗುತ್ತಿದೆ.

ಹೊಸನಗರದಲ್ಲಿ ಅತ್ಯಧಿಕ ಮಳೆ

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬಿಸಿಲು ಹೆಚ್ಚು. ಈ ಬಾರಿಯಂತೂ ವಿಪರೀತ ಬಿಸಿಲು ಮತ್ತು ಧಗೆ ಇತ್ತು. ಆದರೆ ಬೇಸಿಗೆಯ ಬಿಸಿ ಹೆಚ್ಚು ತಟ್ಟಲಿಲ್ಲ. ಮೇ ತಿಂಗಳಲ್ಲಿ ಆಗಾಗ ಮಳೆಯಾಗಿದೆ. ಕೆಲವು ಕಡೆಯಂತೂ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ವಾಡಿಕೆಗಿಂತಲೂ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಮೇ ತಿಂಗಳ ವಾಡಿಕೆ ಮಳೆ 110 ಮಿ.ಮೀ. ಈ ತಿಂಗಳಲ್ಲಿ ಈತನಕ 347 ಮಿ.ಮೀ ಮಳೆಯಾಗಿದೆ. ತಾಲೂಕಿನಲ್ಲಿ ಮೇ 5ರಂದು 138 ಮಿ.ಮೀ ಮಳೆಯಾಗಿತ್ತು. ಮೇ 16ರಂದು 168 ಮಿ.ಮೀ ಮಳೆ ಸುರಿದಿದೆ.

ಇನ್ನು, ಶಿವಮೊಗ್ಗ ತಾಲೂಕಿನಲ್ಲಿ ಈ ತಿಂಗಳ ವಾಡಿಕೆ ಮಳೆ 92 ಮಿ.ಮೀ. ಈವರೆಗೂ 62 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 89 ಮಿ.ಮೀ ವಾಡಿಕೆ ಮಳೆ. ಈತನಕ 96 ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿಯಲ್ಲಿ 100 ಮಿ.ಮೀ ವಾಡಿಕೆ ಮಳೆ. ಆದರೆ 43 ಮಿ.ಮೀ ಮಳೆಯಾಗಿದೆ. ಸಾಗರದಲ್ಲಿ ವಾಡಿಕೆ ಮಳೆ ಪ್ರಮಾಣ 90 ಮಿ.ಮೀ. ಈವರೆಗೂ 86 ಮಿ.ಮೀ ಮಳೆಯಾಗಿದೆ. ಶಿಕಾರಿಪುರದಲ್ಲಿ 99 ಮಿ.ಮೀ ವಾಡಿಕೆ ಮಳೆ. ಈವರೆಗೂ 69 ಮಿ.ಮೀ ಮಳೆಯಾಗಿದೆ. ಸೊರಬದಲ್ಲಿ 80 ಮಿ.ಮೀ ವಾಡಿಕೆ ಮಳೆ. ಈವರೆಗೂ 76 ಮಿ.ಮೀ ಮಳೆಯಾಗಿದೆ.

Advertisement

ಮೇ ತಿಂಗಳ ಕೊನೆಯಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಅದಕ್ಕೂ ಮೊದಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ವಾತಾವರಣ ತಂಪಾಗಿದೆ. ಬೇಸಿಗೆಯಲ್ಲಿಯು ಮಳೆಗಾಲದಂತಾಗಿದೆ. ಜನ ಛತ್ರಿ, ರೇನ್‌ ಕೋಟ್‌ಗಳನ್ನು ಜೊತೆಯಲ್ಲಿ ಹಿಡಿದು ಓಡುಡುವಂತಾಗಿದೆ.

ಸದ್ಯಕ್ಕೆ ಜಲಾಶಯಗಳು ಸಮೃದ್ಧ

ನಿರಂತರ ಮಳೆಯಿಂದಾಗಿ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಏರಿಕೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1763.45 ಅಡಿಯಷ್ಟು ನೀರಿನ ಸಂಗ್ರಹವಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಪ್ರಸ್ತುತ 148.10 ಅಡಿಯಷ್ಟು ನೀರಿದೆ. ಇನ್ನು, ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಅಡಿ ಇದೆ. ಸದ್ಯ ಜಲಾಶಯ ಭರ್ತಿಯಾಗಿದೆ. ಈಗಾಗಲೇ ಜಲಾಶಯದಿಂದ ನೀರು ಹೊರಗೆ ಬಿಡುವ ಸಂಬಂಧ ಮೊದಲ ಮುನ್ನೆಚ್ಚರಿಕೆ ನೀಡಲಾಗಿದೆ. ಬೇಸಿಗೆ ಹೊತ್ತಲ್ಲು ಮಳೆ ಆಗಿದ್ದರಿಂದ ಜಿಲ್ಲೆಯ ವಿವಿಧೆಡೆ ಬೆಳೆ ಹಾನಿ ಉಂಟಾಗಿದೆ. ಮತ್ತೂಂದೆಡೆ ಮುಂಗಾರು ಬೆಳೆ ಬೆಳೆಯಲು ಸಿದ್ಧತೆಗಳು ಕೂಡ ಆರಂಭವಾಗಿದೆ. ಈ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next