Advertisement

ಭರ್ಜರಿ ವ್ಯಾಪಾರ ಕಂಡ ಖಾದಿ ಮೇಳ

12:36 PM Nov 12, 2018 | |

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಆರಂಭಗೊಂಡಿರುವ ಖಾದಿ ಉತ್ಪನ್ನಗಳ ಪ್ರದರ್ಶನ-ಮಾರಾಟ ಮೇಳ ಮುಕ್ತಾಯ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ವ್ಯಾಪಾರಿಗಳ ಮೊಗದಲ್ಲಿ ಸಂತಸ ಮೂಡುವಂತೆ ವ್ಯಾಪಾರವಾಗಿದೆ.

Advertisement

ಆ. 29ರಂದು ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದ ಆವರಣದಲ್ಲಿ ಖಾದಿ ಮೇಳ ಆರಂಭಗೊಂಡಿದೆ. ಖಾದಿ ಉತ್ಪನ್ನಗಳ ಮಾರಾಟದಲ್ಲಿ ಖಾದಿ ಉತ್ಪನ್ನಗಳ ಮೇಲೆ ಶೇ. 35 ರಿಯಾಯ್ತಿ ನೀಡಿದರೆ, ರೇಷ್ಮೆ ಉತ್ಪನ್ನಗಳ ಮೇಲೆ ಶೇ. 25 ರಿಯಾಯ್ತಿ ನೀಡಲಾಗಿತ್ತು. ಕಳೆದ 13 ದಿನಗಳಲ್ಲಿ ಸುಮಾರು 1.75 ಕೋಟಿ ರೂ. ವ್ಯಾಪಾರ ಕಂಡಿರುವ ಮೇಳದಲ್ಲಿ ಇನ್ನೂ ಎರಡು ದಿನಗಳಲ್ಲಿ ಹೆಚ್ಚಿನ ವ್ಯಾಪಾರದ ನಿರೀಕ್ಷೆ ಇರಿಸಲಾಗಿದೆ. 

ಮೇಳದಲ್ಲಿ 75 ಮಳಿಗೆ ಹಾಕಲಾಗಿದ್ದು, ಖಾದಿ  ಮೋದ್ಯೋಗ ಉತ್ಪನ್ನಗಳ ಮಾರಾಟಕ್ಕೆ 15 ದಿನಗಳ ಬಾಡಿಗೆಯಾಗಿ 10 ಸಾವಿರ ರೂ. ನಿಗದಿ ಮಾಡಿದ್ದರೆ, ಖಾ ದಿ-ರೇಷ್ಮೆ ಉತ್ಪಾದಕರಿಗೆ 11 ಸಾವಿರ ರೂ. ಬಾಡಿಗೆ ಪಡೆಯಲಾಗಿದೆ. ಖಾದಿ-ರೇಷ್ಮೆ ಉತ್ಪಾದನೆ ಮಾಡುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಚಿತ್ರದುರ್ಗ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವ್ಯಾಪಾರಿಗಳು ತಮ್ಮ ಖಾದಿ-ರೇಷ್ಮೆ ಉತ್ಪನಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀನಗರ, ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಂದ ಖಾದಿ ಸಂಘ, ಸಂಸ್ಥೆ ಉತ್ಪನ್ನಗಳು ಗಮನ ಸೆಳೆಯುತ್ತಿವೆ.

ಕಾಶ್ಮೀರದ ಕಸೂತಿ ಕಲೆ ಸೀರೆಗಳು, ಕಾಶ್ಮೀರದ ಪಶ್ಮೀನಾ ಎಂಬ ಹೆಸರಿನ ಶಾಲುಗಳು, ಕಾಶ್ಮೀರಿ ಕಲಾವಿದರಿಂದ ರೂಪುಗೊಂಡ ವಿಶೇಷ ಹ್ಯಾಂಡ್‌ ಮೇಡ್‌ ಬ್ಯಾಗುಗಳು, ಪಶ್ಚಿಮ ಬಂಗಾಳದ ಮಸಲಿನ್‌ ಖಾದಿ ಬಟ್ಟೆಗಳು ಹೆಚ್ಚಿನ ವ್ಯಾಪಾರ ಕಂಡಿವೆ. ಉತ್ತರ ಭಾರತದ ವಿವಿಧ ರಾಜ್ಯಗಳ ಭಾರತೀಯ ವಸ್ತ್ರಗಳಿಗೆ ಆಧುನಿಕತೆ ಸ್ಪರ್ಶ ನೀಡಿ ಪ್ರಾದೇಶಿಕ ಸಂಸ್ಕೃತಿ ಪ್ರತೀಕದಂತೆ ಕಂಗೊಳಿಸುತ್ತಿರುವ ಸ್ವದೇಶಿ ಜವಳಿ ಉತ್ಪನ್ನಗಳು ಭರ್ಜರಿ ವಹಿವಾಟು ಕಂಡಿದೆ.

ಖಾದಿಗೆ ಸ್ಥಳೀಯರನ್ನು ಅದರಲ್ಲೂ ಯುವ ಸಮೂಹವನ್ನು ಆಕರ್ಷಿಸುವ ರೀತಿಯಲ್ಲಿ ರೂಪಿಸಿರುವ ಖಾದಿ, ರೇಷ್ಮೆ ಬಟ್ಟೆಗಳು, ಸಿದ್ಧ ಉಡುಪುಗಳಾದ ಕುರ್ತಾ, ಸಲ್ವಾರ್‌, ಚೂಡಿದಾರ, ರೇಷ್ಮೆ ಹಾಗೂ ಖಾದಿ ಸೀರೆ, ಇಳಕಲ್ಲ ಸೀರೆ ಸೇರಿ ಈ ಬಟ್ಟೆಗಳನ್ನು ಕೊಳ್ಳುವಲ್ಲಿ ಗ್ರಾಹಕರು ವಿಶೇಷ ಆಸಕ್ತಿ ತೋರಿದ್ದು ಕಂಡು ಬರುತ್ತಿದೆ.

Advertisement

ಖಾದಿ-ರೇಷ್ಮೆ ಬಟ್ಟೆಗಳ ಮಾತ್ರವಲ್ಲ ವಿವಿಧ ಗ್ರಾಮೋದ್ಯೋಗ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಿದ್ದು, ಪರ್ಸ್‌, ಖಾದಿ ಹಾಗೂ ಸೆಣಬಿನ ಚೀಲಗಳು, ಶ್ರೀಗಂಧದ ಸಾಬೂನು, ಊದುಬತ್ತಿ, ವಿವಿಧ ಕರದಂಟು, ಉಪ್ಪಿನ ಕಾಯಿ ಸೇರಿ ವಿವಿಧ ಖಾದ್ಯಗಳಿಗೂ ಬೇಡಿಕೆ ಕಂಡು ಬಂದಿದೆ.

ಇದರ ಹೊರತಾಗಿಯೂ ಸ್ಥಳೀಯ ವ್ಯಾಪಾರಿಗಳ ಸಿದ್ಧ ಉಡುಪುಗಳ ಮಾರಾಟ ನಿರೀಕ್ಷಿತ ಪ್ರಮಾಣದಲಿ ಕಂಡುಬಂದಿಲ್ಲ. ಪುರುಷರ ಸಿದ್ಧ ಉಡುಪುಗಳ ಹೆಚ್ಚಿನ ಮಾರಾಟ ಕಂಡಿದ್ದರೂ ಮಹಿಳೆಯರು ಹಾಗೂ ಮಕ್ಕಳ ಸಿದ್ಧ ಉಡುಪುಗಳ ಮಾರಾಟದಲ್ಲಿ ಮಾತ್ರ ನಿರೀಕ್ಷಿತ ವ್ಯಾಪಾರ ಆಗಿಲ್ಲ ಎಂಬ ಬೇಸರ ವ್ಯಾಪಾರಿಗಳಲ್ಲಿದೆ.

ಖಾದಿ ಮೇಳಕ್ಕೆ ಬರುವವರಲ್ಲಿ ವೀಕ್ಷಕರಿಗಿಂತ ಖರೀದಿ ಮಾಡುವ ಗ್ರಾಹಕರ ಸಂಖ್ಯೆಯೇ ಹೆಚ್ಚಿರುವ ಕಾರಣ ವಹಿವಾಟು ನಿರೀಕ್ಷೆಯಂತೆ ನಡೆದಿದೆ. ಕಳೆದ ವರ್ಷ 15 ದಿನಗಳಲ್ಲಿ 1.75 ಕೋಟಿ ರೂ. ವ್ಯಾಪಾರ ಆಗಿದ್ದರೆ, ಪ್ರಸಕ್ತ ವರ್ಷ ಈಗಾಗಲೇ 1.75 ಕೋಟಿ ರೂ. ವ್ಯಾಪಾರ ಆಗಿದೆ. ಇನ್ನೂ ಎರಡು ದಿನ ಮೇಳ ಇರುವ ಕಾರಣ 2 ಕೋಟಿ ರೂ. ಮೀರಿ ವಹಿವಾಟು ಆಗುವ ನಿರೀಕ್ಷೆ ಇದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳು ಆಶಾಭಾವ ಹೊಂದಿದ್ದಾರೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ವ್ಯಾಪಾರವಾಗಿದೆ. ರೇಷ್ಮೆ, ಖಾದಿ ಮಾತ್ರವಲ್ಲ ಇತರೆ ಉತ್ಪನ್ನಗಳೂ ಉತ್ತಮ ವ್ಯಾಪಾರವಾಗಿವೆ. ರೇಷ್ಮೆ ಬಟ್ಟೆಗಳು, ಕಾಶ್ಮೀರ ವಸ್ತುಗಳು ಖಾದಿ ಗ್ರಾಮೋದ್ಯೋಗಿಗಳು ತಯಾರಿಸಿದ ಚಪ್ಪಲಿ, ಬಿದಿರಿನ ಉತ್ಪನ್ನಗಳೂ ಚನ್ನಾಗಿ ವ್ಯಾಪಾರ ಆಗಿವೆ. 
 ಸಾವಿತ್ರಮ್ಮ ದಳವಾಯಿ, ಜಿಲ್ಲಾ ಅಧಿಕಾರಿ, ಖಾದಿ ಗ್ರಾಮೋದ್ಯೋಗ ಮಂಡಳಿ, ವಿಜಯಪುರ

ಹಿಂದಿನ ವರ್ಷಕ್ಕಿಂತ ಈ ಬಾರಿ ನಮಗೆ ಉತ್ತಮ ವ್ಯಾಪಾರವಾಗಿದೆ. ಆರಂಭದಲ್ಲಿ ಕೊಂಚ ನಿರುತ್ಸಾಹ ಕಂಡು ಬಂದರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚುರುಕು ಕಂಡಿದೆ. ವಿಜಯಪುರ ನಗರದಲ್ಲಿ ನಡೆದ ಮೇಳದ ವ್ಯಾಪಾರ ಮಾಡಿದ್ದು ಲಾಭ ತಂದಿದ್ದು, ಖುಷಿಯಾಗಿದೆ.
  ಬಿ.ಕೆ. ಮಂಜುನಾಥ ರೇಷ್ಮೆ ಉತ್ಪನ್ನಗಳ ವ್ಯಾಪಾರಿ ಚಿಕ್ಕಬಳ್ಳಾಪುರ

 ಕಳೆದ ವರ್ಷಕ್ಕೆ ಹೋಲಿಸಿದರೆ ಮಳಿಗೆ ನಿರ್ಮಾಣ, ಮೂಲಭೂತ ಸೌಕರ್ಯದಲ್ಲಿ ಉತ್ತಮ ರೀತಿಯಲ್ಲಾಗಿದೆ. ಹೀಗಾಗಿ ವ್ಯಾಪಾರಿಗಳಿಗೆ ಸಮಸ್ಯೆ ಇಲ್ಲದಂತೆ ಉತ್ತಮ ವ್ಯಾಪಾರವಾಗಿದೆ. ಪ್ರತಿ ವರ್ಷ ಇದೇ ರೀತಿ ಮೇಳ ಆಯೋಜಿಸುವ ಮೂಲಕ ಸರ್ಕಾರ ಗ್ರಾಮೋದ್ಯೋಗಗಳನ್ನು ಪ್ರೋತ್ಸಾಹಿಸಬೇಕು. 
ಪಿ.ಸುರೇಶ ಖಾದಿ ವ್ಯಾಪಾರಿ, ಚಿತ್ರದುರ್ಗ

Advertisement

Udayavani is now on Telegram. Click here to join our channel and stay updated with the latest news.

Next