Advertisement

ಯಕ್ಷಗಾನ ಅಕಾಡೆಮಿಗೆ ಹೆಚ್ಚುವರಿ ಪ್ರಶಸ್ತಿ ಭಾಗ್ಯ

10:18 AM Jan 31, 2019 | |

ಶಿರಸಿ: ಬಯಲಾಟದಿಂದ ಪ್ರತ್ಯೇಕಗೊಂಡ ಯಕ್ಷಗಾನ ಅಕಾಡೆಮಿಗೆ ವರ್ಷ ತುಂಬಿದ ಸಂಭ್ರಮದಲ್ಲೇ ಇನ್ನೊಂದು ಭಾಗ್ಯ ಸಿಕ್ಕಿದೆ. ಆರೇಳು ತಿಂಗಳಿನಿಂದ ಅನ್ಯ ಕಾರಣದಿಂದಲೇ ಅನುಮೋದನೆಗೆ ವಿಳಂಬ ಆಗುತ್ತಿದ್ದ ಹೆಚ್ಚುವರಿ ‘ಪ್ರಶಸ್ತಿ’ ಭಾಗ್ಯಕ್ಕೆ ಸರ್ಕಾರ ಅಂತೂ ಅಸ್ತು ಹೇಳಿದೆ.

Advertisement

ಸಾವಿರಾರು ಅರ್ಹ ಕಲಾವಿದರು ಇನ್ನೂ ಸರ್ಕಾರದಿಂದ ಗುರುತಿಸಲ್ಪಡದೇ ಇರುವ ವೇಳೆಯಲ್ಲಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಇದ್ದ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು ಹರ್ಷಕ್ಕೆ ಕಾರಣಾಗಿದೆ. ಇನ್ನು ಅಕಾಡೆಮಿ ನೀಡಲಿರುವ ಪ್ರಶಸ್ತಿಗೆ ಯಕ್ಷಸಿರಿ ಎಂದೂ ನಾಮಾಂಕಿತಗೊಂಡಿದೆ.

ಕರ್ನಾಟಕ ಸರ್ಕಾರವು ಯಕ್ಷಗಾನ ಅಕಾಡೆಮಿಗೆ ಕೇವಲ ಐದು ಅಕಾಡೆಮಿ ಪ್ರಶಸ್ತಿ ಹಾಗೂ ಐದು ಗೌರವ ಪ್ರಶಸ್ತಿಗೆ ಅನುಮತಿ ನೀಡಿತ್ತು. ಇದರ ಹೊರತಾಗಿ ಪಾರ್ತಿಸುಬ್ಬ ಅವರ ಹೆಸರಿನಲ್ಲಿ ನೀಡಲಾಗುವ ಸಾಧಕ ಕಲಾವಿದರಿಗೆ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗಳು ಸೇರಿದ್ದವು. ಬಯಲಾಟ ಯಕ್ಷಗಾನ ಅಕಾಡೆಮಿ ವಿಭಾಗ ಆಗುವಾಗ ಇದ್ದ ಪ್ರಶಸ್ತಿ ಸಂಖ್ಯೆಯನ್ನೂ ಸರ್ಕಾರ ವಿಭಾಗಿಸಿ ಅಕಾಡೆಮಿ ವಿಂಗಡಿಸಿತ್ತು. ಆದರೆ, ಈ ಪ್ರಶಸ್ತಿ ಸಂಖ್ಯೆ ಕಲಾವಿದರ ಸಂಖ್ಯೆಯಲ್ಲಿ ಹಾಗೂ ಕಲಾ ಪ್ರಕಾರದ ಹಿನ್ನೆಲೆಯಲ್ಲಿ ಸಾಕಷ್ಟು ವಿಭಾಗಗಳು ಇದ್ದವು. ಈ ಕಾರಣದಿಂದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಪ್ರಶಸ್ತಿ ಸಂಖ್ಯೆ ಹೆಚ್ಚಳ ಮಾಡುವಂತೆ ಹಾಗೂ ಅಕಾಡೆಮಿಗೆ ನೀಡುವ ಅನುದಾನದಲ್ಲೇ ನಿರ್ವಹಣೆ ಮಾಡುವ ಭರವಸೆ ನೀಡಿ ಪ್ರಸ್ತಾವನೆ ಸಲ್ಲಿಸಿದ್ದರು.

ಅಂತೂ ಕೂಡಿ ಬಂತು: ಯಕ್ಷಗಾನ ಅಕಾಡೆಮಿಗೆ ಸಂಖ್ಯಾ ಕೊರತೆಯಿಂದ ತಲೆಬಿಸಿ ಆಗಿತ್ತು. ಮೂಡಲಪಾಯ, ತೆಂಕು, ಬಡಗು, ಬಡಾಬಡಗು, ತಾಳಮದ್ದಲೆ, ಹಿಮ್ಮೇಳ, ಮುಮ್ಮೇಳ ಎಲ್ಲ ಸೇರಿದರೆ ಅರ್ಹ ಕಲಾವಿದರ ಸಂಖ್ಯೆಯೇ ಇನ್ನೂ ಹತ್ತು ವರ್ಷ ನೂರರಂತೆ ಪ್ರಶಸ್ತಿ ಕೊಟ್ಟರೂ ಸಾಲದು. ಬದುಕನ್ನೇ ಕಲೆಗಾಗಿ ಮೀಸಲಿಟ್ಟವರಿಗೆ ಕನಿಷ್ಟ ಸರ್ಕಾರದ ಗೌರವ ಸಲ್ಲಬೇಕು ಎಂಬುದು ಅಕಾಡೆಮಿ ಅಧ್ಯಕ್ಷರ ಆಶಯವಾಗಿತ್ತು.

ಈ ನಡುವೆ ಕಳೆದ ಆರು ತಿಂಗಳ ಹಿಂದೆಯೇ 2017ನೇ ಸಾಲಿನ ಪ್ರಶಸ್ತಿ ಪ್ರಕಟಿಸಿತು. 2018ರ ಪ್ರಶಸ್ತಿ ಪ್ರಕಟಣೆಗೆ ಈ ಪ್ರಸ್ತಾವನೆಯೂ ಸೇರಲಿ ಎಂಬ ಆಶಯದಲ್ಲಿ ವಿಳಂಬ ಆಗಿತ್ತು. ಇದೀಗ ಸರ್ಕಾರ ಯಕ್ಷಸಿರಿ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಆದೇಶ ಸಂಖ್ಯೆ ಕಸಂವಾ 479 ಕಸಧ 2018 ಬೆಂಗಳೂರು (25-01-2019) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ಎಸ್‌. ಮಾಲತಿ ಆದೇಶ ಹೊರಡಿಸಿದ್ದಾರೆ.

Advertisement

ಸರ್ಕಾರದ ನೂತನ ಆದೇಶ ಪ್ರಕಾರ ಇನ್ನು ಅಕಾಡೆಮಿಯು ಮೊದಲಿನ ಐದಕ್ಕೆ ಐದು ಸೇರಿಸಿ ಅಂತೂ 10 ಪ್ರಶಸ್ತಿಗಳನ್ನು 25 ಸಾವಿರ ರೂ. ಮೊತ್ತದ ಯಕ್ಷಸಿರಿ ಎಂದೂ ಹಾಗೂ 50 ಸಾವಿರ ರೂ. ಮೊತ್ತದ ಐದು ಗೌರವ ಪ್ರಶಸ್ತಿ ಎಂದೂ ಪಾರ್ತಿಸುಬ್ಬ ಹಾಗೂ ಪುಸ್ತಕ ಪ್ರಶಸ್ತಿಗಳನ್ನೂ ಅಕಾಡೆಮಿ ಪ್ರದಾನ ಮಾಡಲಿದೆ. ‘ಯಕ್ಷಗಾನ ಪ್ರಶಸ್ತಿಗೆ ಸಂಖ್ಯಾ ಗ್ರಹಣ’ ಎಂದು ಡಿ.14ರಂದು ‘ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಪ್ರಶಸ್ತಿ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ಸರ್ಕಾರ ಧನಾತ್ಮಕ ನಿಲುವು ತಳೆದಿದೆ.

ಸ್ಥಳ ಬದಲು?
ಈ ಮೊದಲು ನಿಗದಿಯಾಗಿದ್ದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳವನ್ನು ಉಡುಪಿಯ ಬದಲು ಶಿವಮೊಗ್ಗದಲ್ಲಿ ನಡೆಸುವ ಸಿದ್ಧತೆ ನಡೆದಿದೆ. ಫೆಬ್ರವರಿ ಮಾಸಾಂತ್ಯಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮೂಲವೊಂದು ದೃಢಪಡಿಸಿದೆ.

ಯಕ್ಷಗಾನ ಅಕಾಡೆಮಿ ಪ್ರಸ್ತಾವನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುಮತಿ ನೀಡಿದ್ದು ಹರ್ಷ ತಂದಿದೆ.
•ಪ್ರೊ| ಎಂ.ಎ. ಹೆಗಡೆ ದಂಟ್ಕಲ್‌
 ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next