Advertisement

ಮೂಡಬಿದಿರೆ ವಿಧಾನಸಭಾಕ್ಷೇತ್ರ –ಎಲ್ಲ ಪಕ್ಷಗಳಲ್ಲೂ ಅಸ್ಪಷ್ಟ 

01:33 PM Mar 11, 2018 | |

1962ರಲ್ಲಿ ಅಸ್ತಿತ್ವಕ್ಕೆ ಬಂದ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಮೊದಲ ಎರಡು ಚುನಾವಣೆಗಳಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಗೆ ಒಲಿದು ಮುಂದೆ ಒಟ್ಟು 7 ಬಾರಿ ಕಾಂಗ್ರೆಸ್‌ಗೆ, 2 ಬಾರಿ ಜನತಾ ಪಕ್ಷ, ಇನ್ನೊಮ್ಮೆ ಜನತಾ ದಳ (ಅದೇ ಅಭ್ಯರ್ಥಿ)ಕ್ಕೆ ಜಯ ತಂದುಕೊಟ್ಟ ಕ್ಷೇತ್ರ.

Advertisement

ಕಾಂಗ್ರೆಸ್‌: ಎದ್ದುಕಾಣುವ ಹೆಸರು ಈಗಾಗಲೇ ನಿರಂತರ ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಗಳೂ ಆಗಿ ಮೆರೆದ ಅಭಯಚಂದ್ರರದು. ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರನ್ನು ಮುಂದಿಟ್ಟವರು. ಇದೇ ವೇಳೆ ಈ ಭಾಗದಲ್ಲಿ ಮತ ಬಾಹುಳ್ಯದಲ್ಲಿ 2ನೇ ಸ್ಥಾನದಲ್ಲಿರುವ ಕ್ರೈಸ್ತ ಸಮುದಾಯದಿಂದ ಐವನ್‌ ಡಿ’ಸೋಜಾ ಮೂಡಬಿದಿರೆಯಲ್ಲಿ ತಮ್ಮ ಜನಸ್ಪಂದನ ಕಚೇರಿ ತೆರೆದು ಸಕ್ರಿಯರಾಗಿದ್ದಾರೆ. ತಮ್ಮ ಸಾಧನೆಗಳ ಪುಸ್ತಕ ಬಿಡುಗಡೆಯೊಂದಿಗೆ ಶಕ್ತಿಯನ್ನು ಒಗ್ಗೂಡಿಸುತ್ತಿದ್ದಾರೆ.

ಮೂಡಬಿದಿರೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು, ‘ಅಭಯಚಂದ್ರರ ಸ್ಪರ್ಧೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಾಗ ಎದ್ದು ನಿಂತು ತಮ್ಮ ವಿನೀತ ಸಮ್ಮತಿ ವ್ಯಕ್ತಪಡಿಸಿದವರು ಅಭಯಚಂದ್ರ. ಆದರೆ ನಿಧಾನವಾಗಿ ಮತ್ತೆ ಮಿಥುನ್‌ ರೈಗೆ ಕೈ ಸೈ ಎಂಬ ಮಾತೂ ತೇಲಿ ಬರುತ್ತಿದೆ. ಈ ನಡುವೆ ಪಿಲಿಕುಳ ತಾರಾಲಯ ಉದ್ಘಾಟನೆ ಸಂದರ್ಭ ಶಾಸಕ ಮೊದಿನ್‌ ಬಾವಾ ಅವರು ಕವಿತಾ ಸನಿಲ್‌ ಹೆಸರನ್ನು ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಗೆ ಸೇರಿಸುವ ಮಾತು ಆಡಿರುವುದು 4ನೇ ಆಕಾಂಕ್ಷಿ ಇರುವುದನ್ನೂ ಸೂಚಿಸುತ್ತದೆ.

ಬಿಜೆಪಿ: ಕ್ಷೇತ್ರದಲ್ಲಿ ನಿಧಾನವಾಗಿ ಬೆಳೆದ ಬಿಜೆಪಿ ಜಗದೀಶ ಅಧಿಕಾರಿ ಪಕ್ಷ ಪ್ರವೇಶಿಸಿದ ಬಳಿಕ ಹೊಸ ಬೆಳಕು ಚೆಲ್ಲತೊಡಗಿದ್ದನ್ನು ಗಮನಿಸಬಹುದು. ಕಳೆದೆರೆಡು ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ನೀಡಿತ್ತು. ಆಗ ಸ್ವಲ್ಪದರಲ್ಲೇ ಗೆಲುವಿನಿಂದ ವಂಚಿತರಾದ ಉಮಾನಾಥ ಕೋಟ್ಯಾನ್‌ ಈ ಕ್ಷೇತ್ರದಲ್ಲಿ ಪ್ರಬಲರಾಗಿರುವ ಬಿಲ್ಲವ ಸಮುದಾಯದವರು. ಅವರು ಸ್ಪರ್ಧಿಸಿ ದರೆ ಗೆಲುವು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಒಂದೆಡೆಯಾದರೆ ಜಗದೀಶ ಅಧಿಕಾರಿಯೂ ಈ ಸಲ ಅವಕಾಶ ಸಿಕ್ಕಿದರೆ ಹೋರಾಡುವ ಮನಸ್ಸುಳ್ಳವರೆಂದು ಕಾಣಿಸುತ್ತಿದೆ. ಪಕ್ಕಾ ಆರೆಸ್ಸೆಸ್‌ ಮೂಲದ, ಸದ್ಯ ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿಯಾಗಿರುವ ಸುದರ್ಶನ ಎಂ. ಕೂಡ ಆಕಾಂಕ್ಷಿ. ಇನ್ನು ಕಳೆದ ಕೆಲವು ವರ್ಷಗಳಿಂದ ಜನಮನ ಜನಮನ ಸೆಳೆಯುತ್ತಿರುವ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅವರಿಗೂ ಸ್ಪರ್ಧಿಸುವ ಉತ್ಸಾಹವಿದ್ದಂತಿದೆ.

ಇತ್ತೀಚೆಗೆ ಮೂಡಿಬಂದಿರುವುದು ದ.ಕ. ಜಿಲ್ಲಾ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ| ಸುಧೀರ್‌ ಹೆಗ್ಡೆ. ಅಲ್ಲಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸುತ್ತ ಜನಮನಕ್ಕೆ ಹತ್ತಿರವಾಗುತ್ತಿರುವ ನಗು ಮೊಗದ ವಿನಯಶೀಲ. ಆರೆಸ್ಸೆಸ್‌ ಮೂಲದಲ್ಲಿ, ಅಮಿತ್‌ ಶಾ ವಲಯದಲ್ಲಿ ಮೂಡಿಬಂದ ಹೆಸರು ಡಾ| ಹೆಗ್ಡೆ ಅವರದು ಎನ್ನಲಾಗುತ್ತಿದೆ. ಸಂಸದ ನಳಿನ್‌, ಕಸ್ತೂರಿ ಪಂಜ, ಈಶ್ವರ ಕಟೀಲು, ಕೆ.ಪಿ. ಸುಚರಿತ ಶೆಟ್ಟಿ ಮತ್ತಿತರ ಹೆಸರು ಆಗೊಮ್ಮೆ ಈಗೊಮ್ಮೆ ಕೇಳಿಸಿದ್ದರೆ ಅಸಹಜವೇನೂ ಆಗಿರಲಿಕ್ಕಿಲ್ಲ.

Advertisement

ಜೆಡಿಎಸ್‌: ಅಮರನಾಥ ಶೆಟ್ಟಿ ಅವರಿಗೆ ಈ ಬಾರಿ ಯುವಜನರಿಗೆ ಟಿಕೇಟ್‌ ಕೊಡಬೇಕು ಎಂಬ ಮನಸ್ಸಿದ್ದಂತಿದೆ. ಜೆಡಿಎಸ್‌ ಕ್ಷೇತ್ರಾಧ್ಯಕ್ಷ, ರಾಜ್ಯ ಯುವ ಜೆಡಿಎಸ್‌ ಉಪಾಧ್ಯಕ್ಷ ಅಶ್ವಿ‌ನ್‌ ಜೊಸ್ಸಿ ಪಿರೇರಾ ಅವರು ಆಕಾಂಕ್ಷಿ ಎಂಬ ಚಿತ್ರಣ ಇತ್ತು. ಆದರೆ ಈಗ ದಿವಾಕರ ಶೆಟ್ಟಿ ತೋಡಾರು ಪಟ್ಟಿಯ ಮುಂಚೂಣಿಯಲ್ಲಿದ್ದಾರೆ. ಸಿಪಿಐ ಎಂ: ನಮಗೂ ಆಕಾಂಕ್ಷೆ ಇದೆ, ಸೀಟೂ ಖಾತರಿ ಆಗಿದೆ ಎಂದಿದ್ದಾರೆ ಯಾದವ ಶೆಟ್ಟಿ. ಸ್ವತಂತ್ರ: ಕಾರ್ಮಿಕ ಸಂಘದ ಮೂಲಕ ಸುದ್ದಿಯಲ್ಲಿರುವ ಸುದತ್ತ ಜೈನ್‌ ಈ ಸಲವೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರೇ ಆಗಮಿಸಿ ಮುಕ್ಕಾಲು ಶತಕೋಟಿ ಯೋಜನಾ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ, ಕೆಲವು ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ‘ಮುಂದೆಯೂ ನಿಮ್ಮ ಆಶೀರ್ವಾದ ಬೇಕು’ ಎಂಬ ಕೋರಿಕೆ ಮಂಡಿಸಿದ್ದಾರೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಬಿಜೆಪಿಯ ಜನಸುರಕ್ಷಾ ಯಾತ್ರೆ ಮೂಡಬಿದಿರೆಯನ್ನೂ ಹಾದು ‘ಮಂಗಳೂರು ಚಲೋ’ ಎಂದು ಹೆಜ್ಜೆ ಹಾಕುವ ಸಂದರ್ಭ ಪಕ್ಷದ ರಾಜ್ಯ ನಾಯಕರು ಚುನಾವಣಾ ಪೂರ್ವ ಕಹಳೆ ಊದಿದ್ದಾರೆ. ಸಿಪಿಐ (ಎಂ) ರಾಜ್ಯಸಮ್ಮೇಳನವೇ ಮೂಡಬಿದಿರೆಯಲ್ಲಿ ತಿಂಗಳ ಹಿಂದೆ ನಡೆದಿದೆ. ಹಿರಿಯ ನಾಯಕರು ಕತ್ತಿ ಸುತ್ತಿಗೆಗೆ ಬಲ ತುಂಬುವ ಕೆಲಸ ಮಾಡಿದ್ದಾರೆ.

ಯಾರ ಎದುರು ಯಾರೋ?
ಕಾಂಗ್ರೆಸ್‌ನಲ್ಲಿ ಯಾರು ನಿಂತರೆ ಬಿಜೆಪಿಯಲ್ಲಿ ಯಾರು? ಗೆಲ್ಲುವ ಅಭ್ಯರ್ಥಿಯ ಎದುರು ಅವರ ಪರೋಕ್ಷ ಒತ್ತಡದಿಂದಾಗಿ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದಂತೆ -ಹೌದೇ? ಈ ಪಕ್ಷದಿಂದ ಅರ್ಹತೆ ಇದ್ದೂ ಸಿಗದೇ ಇದ್ದರೆ ಮಿಂಚಿನ ಬದಲಾವಣೆಯಲ್ಲಿ ಆ ಪಕ್ಷದಿಂದ ನಿಲ್ಲುವರಂತೆ ಅವರು ಹೌದೇ? ಎಂಬಿತ್ಯಾದಿ ಪ್ರಶ್ನೆಗಳು; ಜಾತಿ ಮತಗಳ ಲೆಕ್ಕಾಚಾರದಿಂದ ಅಭ್ಯರ್ಥಿಯನ್ನು ಇಳಿಸುವ ಸಾಧ್ಯತೆ ಇರುವುದರಿಂದ ನಿಶ್ಚಿತವಾಗಿ ಇಂಥವರೇ ಟಿಕೇಟ್‌ ಪಡೆಯುತ್ತಾರೆ ಎನ್ನುವಂತಿಲ್ಲ ಸದ್ಯ. 

 ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next