Advertisement

ಸರಕಾರಿ ಭಾಗ್ಯದಲ್ಲಿ ಅರಳುವ ಉನ್ನತ ಶಿಕ್ಷಣ

11:58 PM Jun 17, 2019 | mahesh |

ಬರೀ ಮೂರೂವರೆ ಸಾವಿರ ಫೀಸು ಕಟ್ಟಿ ಹತ್ತಾರು ಸಾವಿರ ಹಣವನ್ನು ವಾರ್ಷಿಕ ಸ್ಕಾಲರ್‌ಶಿಪ್‌ ಆಗಿ ಪಡೆಯುವ ವಿದ್ಯಾರ್ಥಿಗಳು ನಮ್ಮಲ್ಲೇ ಇದ್ದಾರೆ. ಓದುವ ಕಾಲದಲ್ಲೇ ತನ್ನ ಪ್ರತಿಭೆಗೆ ದಕ್ಕಿದ ಸ್ಕಾಲರ್‌ಶಿಪ್‌ ಮೊತ್ತದಿಂದ ತಂದೆ-ತಾಯಿಗೆ ಹೊಸ ಬಟ್ಟೆ ಖರೀದಿಸಿ ಕೊಟ್ಟ ವಿದ್ಯಾರ್ಥಿನಿಯನ್ನು ನಾನು ಕಂಡಿದ್ದೇನೆ. ಅದೇ ಹಣದಿಂದ ಓದಿ ಕಾಲೇಜು ಬಿಟ್ಟು ಹೋಗುವಾಗ ತನ್ನ ತಂಗಿಗೆ ಅದೇ ಮೊತ್ತದಿಂದ ಫೀಸು ತುಂಬಿದ ಅಕ್ಕಂದಿರನ್ನು ನೋಡಿದ್ದೇನೆ.

Advertisement

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ವೃದ್ಧಿಸಬೇಕು ಮತ್ತು ಇದಕ್ಕಾಗಿ ಆಯಾ ಕಾಲೇಜಿನ ಪ್ರಾಚಾರ್ಯರಾದಿಯಾಗಿ ಉಪನ್ಯಾಸಕರು ಪ್ರಯತ್ನಿಸಬೇಕು., ಕನಿಷ್ಠ ಶೇ. 10ರಷ್ಟಾದರೂ ವರ್ಷದಿಂದ ವರ್ಷಕ್ಕೆ ದಾಖಲಾತಿ ಜಾಸ್ತಿಯಾಗಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಎಚ್ಚರಿಸಿದೆ. ಇತ್ತೀಚಿನ ನಾಲ್ಕೈದು ವರ್ಷಗಳ ಬೆಳವಣಿಗೆಯನ್ನು ಗಮನಿಸಿದರೆ ಸಂಬಂಧಿಸಿದ ಇಲಾಖೆ ಯಾವುದೇ ಎಚ್ಚರಿಕೆ – ಸೂಚನೆಯನ್ನು ನೀಡದೆಯೂ ಪ್ರಯತ್ನ, ಪ್ರಲೋಭನೆಗಳಿಲ್ಲದೆಯೇ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸೇರ್ಪಡೆ ಗಮನಾರ್ಹವಾಗಿ ಹೆಚ್ಚಿದೆ.

ಹತ್ತು ವರ್ಷಗಳ ಹಿಂದೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಗರಿಷ್ಠ ಡೊನೇಶನ್‌ ಕೊಟ್ಟು ಸೇರಿ ಸೀಟುಗಳೆಲ್ಲಾ ಖಾಲಿಯಾಗಿ ಕೊನೆಗೆ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳ ಕಡೆಗೆ ಮುಖ ಮಾಡುವುದಿತ್ತು. ಆದರೆ ಈಗ ಸರಕಾರಿ ಕಾಲೇಜುಗಳಲ್ಲಿ ಸೀಟು ಸಿಗದೆ ಖಾಸಗಿಗೆ ಬರುವ, ಇದೇ ಕಾರಣಕ್ಕಾಗಿ ಡೊನೇಶನ್‌ ತಗ್ಗಿಸಿ ಕೆಲವೊಮ್ಮೆ ಉಚಿತವಾಗಿ ಸೀಟು ಕೊಡುವ, ಅರ್ಜಿ ಪಡೆಯಲು ಬಂದ ಕ್ಷಣವೇ ಎಡ್ಮಿಶನ್‌ ಮಾಡಿಕೊಳ್ಳುವ ಪ್ರಮೇಯ ಖಾಸಗಿ ಕಾಲೇಜುಗಳಲ್ಲಿದೆ.

ಹೊಸದಾಗಿ ಆರಂಭಗೊಂಡ, ಇನ್ನೂ ಸ್ವಂತ ಕಟ್ಟಡ ಭಾಗ್ಯವಿಲ್ಲದ, ಹಳೆಯ ಸರಕಾರಿ ಕಟ್ಟಡವೊಂದರಲ್ಲಿ ನಡೆಯುವ ಸರಕಾರಿ ಮಹಿಳಾ ಕಾಲೇಜೊಂದರ ಭಾಷಾ ಪ್ರಾಧ್ಯಾಪಕನಾಗಿ ಖಾಸಗಿಯ ನಿರಾಕರಣೆಯ ಸರಕಾರಿ ಪ್ರೀತಿಯ ಈ ಸ್ಥಿತ್ಯಂತರವನ್ನು ಹತ್ತಿರದಿಂದ ಕಂಡು ಅನುಭವಿಸಿ ಬರೆಯುತ್ತಿದ್ದೇನೆ. ಉನ್ನತ, ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೆ ಹೆಸರುವಾಸಿಯಾದ ಕರಾವಳಿಯಲ್ಲಿ ಇತ್ತೀಚೆಗೆ ವಿಜ್ಞಾನ-ವಾಣಿಜ್ಯವನ್ನುಳಿದು ಕಲಾ ಪದವಿಗೆ ಆಕರ್ಷಣೆ ಕಡಿಮೆಯಾಗಿದೆ. ಆರ್ಟ್ಸ್ ಪದವಿ ತರಗತಿಗಳಲ್ಲಿ ತುಂಬಿ ತುಳುಕುತ್ತಿದ್ದ ಕಡೆ ಈಗ ಕೇವಲ ಹತ್ತು ಹದಿನೈದು ವಿದ್ಯಾರ್ಥಿಗಳು ಸೇರುತ್ತಿದ್ದಾರೆ. ಸಾಂಪ್ರದಾಯಿಕ ಪದವಿಯನ್ನು ಮುಚ್ಚದೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಮ್ಯಾನೇಜ್‌ಮೆಂಟ್‌ಗಳು ಮಾಡುವ ಸರ್ಕಸ್‌ ಕಡಿಮೆಯಲ್ಲ. ಬಿ.ಎ. ಒಳಗೆ ಪತ್ರಿಕೋದ್ಯಮ, ಮನಃಶಾಸ್ತ್ರ, ಯೋಗ ಇತ್ಯಾದಿಗಳನ್ನು ತುರುಕಿ, ಜಾಹೀರಾತು ನೀಡಿ, ಪಿಯುಸಿ ಕಾಲೇಜುಗಳಿಗೆ ಮೊದಲೇ ಭೇಟಿ ನೀಡಿ, ಆಕರ್ಷಿಸಿ, ಬೆರಳೆಣಿಕೆಯನ್ನು ವಿದ್ಯಾರ್ಥಿಗಳನ್ನು ಸೇರಿಸ ಲಾಗುತ್ತದೆ.

ಇದಕ್ಕೆ ತೀರಾ ವಿರುದ್ಧವಾದ ನಮ್ಮ ಸರಕಾರಿ ಮಹಿಳಾ ಕಾಲೇಜಿನಲ್ಲಿ ಸಾಂಪ್ರದಾಯಿಕ ಬಿ.ಎದಲ್ಲೇ ಎರಡು ವಿಭಾಗ ಗಳಿದ್ದು, ಗ್ರಾಮೀಣ ಪ್ರದೇಶದ ಸುಮಾರು ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಹೊಸ ಕಾಲೇಜಿನಲ್ಲಿ ಸುಮಾರು 600ಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿರುವುದು ಈ ಕೋರ್ಸಿಗೆ ಇನ್ನೂ° ಬೇಡಿಕೆ ಕುಸಿದಿಲ್ಲ ಎಂಬುದನ್ನು ತೋರಿಸುತ್ತದೆ. ಇಷ್ಟೂ ವಿದ್ಯಾರ್ಥಿಗಳು ಕೂಡಾ ಈಗಾಗಲೇ ಖಾಸಗಿ ಕಾಲೇಜು ಗಳಿಗೆ ಸೇರಿರುವ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಅಥವಾ ಸಮಾ ನಾಂತರ ಅಂಕ ಪಡೆದ, ಗರಿಷ್ಠಾಂಕ ಆಧಾರಿತ ಮೀಸಲಾತಿ ಪಟ್ಟಿಯ ಪ್ರಕಾರವೇ ಆಯ್ಕೆಯಾದವರು ಎಂಬುದು ಸರ್ವವಿದಿತ.

Advertisement

ದಕ್ಷಿಣ ಭಾರತದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಸರಕಾರಿ ಕಾಲೇಜುಗಳನ್ನು ಹೊಂದಿದ ಕೀರ್ತಿ ನಮ್ಮ ರಾಜ್ಯದ್ದು. ನಾಲ್ಕು ನೂರಕ್ಕಿಂತಲೂ ಹೆಚ್ಚು ಸರಕಾರಿ ಕಾಲೇಜುಗಳಿದ್ದು ಸಾಮೀಪ್ಯ, ಕಟ್ಟಡ, ಕುಡಿಯುವ ನೀರು, ಆಟದ ಮೈದಾನ, ಬಸ್ಸು – ಸಾರಿಗೆ ವ್ಯವಸ್ಥೆಯಂತಹ ಮೂಲಭೂತ ಕೊರತೆಗಳಿದ್ದರೂ ಗ್ರಾಮ್ಯ ವಿದ್ಯಾರ್ಥಿಗಳು ಮಾತ್ರ ಇಲ್ಲೇ ಮುಗಿಬೀಳುತ್ತಿರುವುದು, ಇಲಾಖೆ ನೇಮಕಾತಿ, ಮೂಲಭೂತ ಸೌಕರ್ಯವೃದ್ಧಿ ಬಗ್ಗೆ ಪ್ರಯತ್ನಿಸುತ್ತಿರುವುದು ಅಭಿನಂದನೀಯ.

ಪದವಿಗಾಗಿ ಸ್ಥಳೀಯ ಬೇರೆ ಖಾಸಗಿ ಕಾಲೇಜುಗಳು ವಾರ್ಷಿಕ ಇಪ್ಪತ್ತು ಸಾವಿರ ಫೀಸು ಪೀಕಿದರೆ, ಸರಕಾರಿ ಕಾಲೇಜು ಪಡೆಯುವ ಫೀಸು ಎಲ್ಲಾ ಸೇರಿ ಸುಮಾರು ಮೂರೂವರೆ ಸಾವಿರ ಅಷ್ಟೆ. ಈಗ ಸಮಾಜ ಕಲ್ಯಾಣ ಇಲಾಖೆ ಹಾಗೂ ಬೇರೆ ಬೇರೆ ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರತಿಭೆ-ಅಂಕಗಳನ್ನು ಗಮನಿಸಿ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ಹಣವನ್ನು ಸ್ಕಾಲರ್‌ಶಿಪ್‌ ಆಗಿ ನೀಡುತ್ತವೆ. ಬರೀ ಮೂರೂವರೆ ಸಾವಿರ ಫೀಸು ಕಟ್ಟಿ ಹತ್ತಾರು ಸಾವಿರ ಹಣವನ್ನು ವಾರ್ಷಿಕ ಸ್ಕಾಲರ್‌ಶಿಪ್‌ ಆಗಿ ಪಡೆಯುವ ವಿದ್ಯಾರ್ಥಿಗಳು ನಮ್ಮಲ್ಲೇ ಇದ್ದಾರೆ. ಓದುವ ಕಾಲದಲ್ಲೇ ತನ್ನ ಪ್ರತಿಭೆಗೆ ದಕ್ಕಿದ ಸ್ಕಾಲರ್‌ಶಿಪ್‌ ಮೊತ್ತದಿಂದ ತಂದೆ-ತಾಯಿಗೆ ಹೊಸ ಬಟ್ಟೆ ಖರೀದಿಸಿ ಕೊಟ್ಟ ವಿದ್ಯಾರ್ಥಿನಿಯನ್ನು° ಕಂಡಿದ್ದೇನೆ. ಅದೇ ಹಣದಿಂದ ಓದಿ ಕಾಲೇಜು ಬಿಟ್ಟು ಹೋಗುವಾಗ ತನ್ನ ತಂಗಿಗೆ ಅದೇ ಮೊತ್ತದಿಂದ ಫೀಸು ತುಂಬಿದ ಅಕ್ಕಂದಿರನ್ನೂ ನೋಡಿದ್ದೇನೆ.

ಕರ್ನಾಟಕದ ನಾಲ್ಕುನೂರಕ್ಕಿಂತಲೂ ಹೆಚ್ಚು ಸರಕಾರಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಶೇ. 95 ಮಕ್ಕಳು ಗ್ರಾಮಾಂತರ ಪ್ರದೇಶದವರು. ಇದರಲ್ಲಿ ಶೇ. 50 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪಡೆದುಕೊಂಡ ತಮ್ಮ ಮನೆಯ ಮೊದಲ ತಲೆಮಾರಿನವರು. ಇವರ ತಂದೆ ತಾಯಿ, ಅಜ್ಜ ಅಣ್ಣ ಯಾರೂ ಪದವಿ ಓದಿದವರಲ್ಲ. ಈ ಕಾರಣಕ್ಕಾಗಿಯೇ ತರಗತಿಯೊಳಗಡೆ ಇವರ ಕಣ್ಣು, ಮನಸ್ಸುಗಳಲ್ಲಿರುವ ಬೆರಗು, ಕುತೂಹಲ, ಮುಗ್ಧತೆ, ಕಲಿಕೆಯ ದಾಹ, ಬದ್ಧತೆ ಖಾಸಗಿಯ ತರಗತಿಯೊಳಗಡೆ ಇರಲು ಸಾಧ್ಯವೇ ಇಲ್ಲ. ಮೈ- ಮನಸ್ಸುಗಳೊಳಗಡೆ ಸಹಜವಾಗಿ ತುಂಬಿಕೊಂಡೇ ಬರುವ ಹಳ್ಳಿಯ ಸೊಗಡು, ಬಡತನ, ನೆಲವಾಸಿ ವಾಸನೆ, ಚೆಲ್ಲಾಟ-ಚೇಷ್ಟೆಗಳು ಇದರಲ್ಲಿ ಇರುತ್ತವೆ.

ಪತ್ರಿಕೋದ್ಯಮವನ್ನು ಕಳಚಿ ಕಾಲೇಜು ಮೇಸ್ಟ್ರಾಗಿ ಇಂಥ ತರಗತಿಯೊಳಗಡೆ ನಾನು ನಿತ್ಯ ಅನುಭವಿಸುವ ಸುಖ, ಕಲಿಕೆ ಹೇಳಿ ಮುಗಿಸುವಂಥದ್ದಲ್ಲ. ಮೂವತ್ತು ವರ್ಷಗಳ ಹಿಂದೆ ಇಂಥದ್ದೇ ಕಾಲೇಜಿನಲ್ಲಿ ಕೂತಿದ್ದಾಗ ನನ್ನೊಳಗಡೆ ಯಾವ ಗ್ರಾಮಮುಗ್ಧತೆ, ಕಲಿಕೆಯ ಆಸೆ, ಬಡತನ ಸ್ಥಾಯಿಯಾಗಿತ್ತೋ ಅದೇ ಮನಸ್ಥಿತಿ ಇವತ್ತಿನ ಸರಕಾರಿ ಕಾಲೇಜುಗಳೊಳಗಡೆ ಇದೆ. ಈ ಕಾರಣಕ್ಕಾಗಿಯೇ ಬಡತನ ಮತ್ತು ಬಡತನದ ನಡುವಿನ ನಮ್ಮ ಸಂವಾದ, ಪಾಠ, ಸಮಾಲೋಚನೆ ಹೆಚ್ಚು ಮೌಲ್ಯವನ್ನು ಪಡೆಯುತ್ತವೆ ಮತ್ತು ಈ ಜಗತ್ತಿನ ಅತ್ಯುತ್ತಮ ಸಂವಾದ ಎಂದರೆ ಅದು ಬಡತನ ಮತ್ತು ಬಡತನದ ನಡುವೆ ಮಾತ್ರ ಎಂದು ನಾನು ನಂಬಿದ್ದೇನೆ.

ಎಂಬತ್ತು, ತೊಂಬತ್ತು ವರ್ಷದ ಹಳೆಯ ಬ್ರಿಟಿಷರ ಕಟ್ಟಡವಾಗಿರುವ ನಮ್ಮ ಕಾಲೇಜು ಯಾವುದೇ ಮಗ್ಗುYಲಲ್ಲಿ ನಿಂತು ಹೇಗೆ ನೋಡಿದರೂ ನಾಗರಿಕ ಕಾಲೇಜಿನಂತೆ ಕಾಣಿಸದೆ ಒಂದು ಹಳೆಯ ಗುತ್ತಿನ, ಮಹಾಮನೆಯಂತೆ ಕಾಣಿಸುತ್ತದೆ. ಈ ಕಿಷ್ಕಿಂದೆಯೊಳಗೆ ಮೇಷ್ಟ್ರುಗಳೂ ಸೇರಿ ಸುಮಾರು 700 ಮಂದಿ ನಿತ್ಯ ಬಾಳುತ್ತೇವೆ. ಆಧುನಿಕ – ನಾಗರಿಕ ಮನಸ್ಸಿನೊಳಗಡೆ ಕಾಲೇಜು ಎಂದರೆ ಹೀಗೆಯೇ ಇರುತ್ತದೆ, ಇರಬೇಕು ಎಂಬ ಒಂದು ಸಿದ್ಧ ಭೌತಿಕ ಕಲ್ಪನೆ ಇರುತ್ತದೆ. ಏಕಸೂತ್ರದ ಉದ್ದದ ಕಟ್ಟಡ, ಅದರ ಮೇಲೆ ಮಹಡಿ, ಮುಂಭಾಗದಲ್ಲಿ ಆಟದ ಮೈದಾನ ಸುತ್ತ ಗೋಡೆ-ಗೇಟು, ಸ್ಮಾರ್ಟ್‌ ಬೋರ್ಡು, ಸೋಡಿಯಂ, ಪ್ರೊಜೆಕ್ಟರ್‌, ಗ್ರಂಥಾಲಯ ಹೀಗೆ ಏನೇನೋ ಇರಲೇಬೇಕು. ಟೈಲ್ಸ್‌ ಹಾಕಿದ ನೆಲ, ತಲೆಯ ಮೇಲೆ ತಿರುಗುವ ಫ್ಯಾನ್‌ ಹೀಗೆ ಒಂದಷ್ಟು ನಾಗರಿಕ ಕಲ್ಪನೆಗಳು ಇದ್ದೇ ಇರುತ್ತವೆ.

ಅತ್ಯುತ್ತಮ ಕಾಲೇಜು, ಅತ್ಯುತ್ತಮ ತರಗತಿ, ಮೂಲಭೂತ ಸೌಲಭ್ಯಗಳಾಚೆ ಅತ್ಯುತ್ತಮ ಪಾಠ-ಪ್ರವಚನವೆಂದರೆ ಎದುರುಗಡೆ ಕೂತ ಪಾಠ “ಕೇಳುವ ಮನಸ್ಸಿರುವ’ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಎಂಬುದನ್ನು ನಾನು ಕಂಡುಕೊಂಡದ್ದು ಸರಕಾರಿ ಕಾಲೇಜಿನಲ್ಲಿ. ಈ ಕಾರಣಕ್ಕಾಗಿಯೇ ಕಿಷ್ಕಿಂದೆಯಲ್ಲಿ ನಿಂತರೂ ಕುವೆಂಪು ರಾಮಾಯಣದ ನನ್ನ ರಾಮ ದಾರಿ ತಪ್ಪಿ ಎಲ್ಲೆಲ್ಲೊ ಹೋಗಿ ಸುತ್ತಾಡಿ ಸುಳಿದು ಬರುತ್ತಾನೆ. ಬಾಯಿ ಅಗಲಿಸಿ ಕೇಳುವ ಹಳ್ಳಿ ಮನಸ್ಸು ಅದ್ಭುತ ಪಾಠ – ಸಂವಾದಕ್ಕೆ ಬೇಕಾದ ಪರಿಸರವನ್ನು ಸೃಷ್ಟಿಸುತ್ತದೆ. ಖಾಸಗಿ ಕಾಲೇಜುಗಳಲ್ಲಿ ಇಂಥ ಪಾಠಗಳು ದಾರಿ ತಪ್ಪುವ ಸಾಧ್ಯತೆಗಳು ತುಂಬಾ ಕಡಿಮೆ. ವಿದ್ಯಾರ್ಥಿಗಳ ಶ್ರೀಮಂತಿಕೆಯ ಬಹುರೂಪಗಳು ಶಿಕ್ಷಕನ ಭ್ರಮಾಲೋಕದ ಹಾದಿಯನ್ನು ಮುರಿದು ವಾಸ್ತವಕ್ಕೆ ತರುತ್ತವೆ. ಸಿರಿವಂತಿಕೆಗೂ ಶ್ರೀಮಂತಿಕೆಗೂ ಇರುವುದು ಇದೇ ವ್ಯತ್ಯಾಸ. ಒಂದು ಹೃದಯಕ್ಕೆ ಸಂಬಂಧಿಸಿದುದು ಮತ್ತೂಂದು ಕಿಸೆಗೆ ಸಂಬಂಧಿಸಿದುದು. ಸರಕಾರಿ ಕಾಲೇಜುಗಳಲ್ಲಿ ಹೃದಯದ ಭಾಗವೇ ಹೆಚ್ಚು.

ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next