ಬೆಂಗಳೂರು : ರಾಜ್ಯದಲ್ಲಿ ಹಿಂದಿನ ಸರಕಾರವು ಅವೈಜ್ಞಾನಿಕವಾಗಿ ಘೋಷಿಸಿರುವ ಹೊಸ ವಿಶ್ವವಿದ್ಯಾನಿಲಯಗಳಿಗೆ ಅನುದಾನ ಹೊಂದಿಸುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನಾನು ಉನ್ನತ ಶಿಕ್ಷಣ ಸಚಿವನಾಗಿರುವ ತನಕ ಹೊಸ ವಿವಿಗಳನ್ನು ಘೋಷಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೂಪುರೇಷೆಗಳಿಲ್ಲದೆ ಪ್ರತಿ ಜಿಲ್ಲೆಗೂ ಒಂದು ವಿವಿಯನ್ನು ಹಿಂದಿನ ಸರಕಾರ ಘೋಷಿಸಿತ್ತು.
40-50 ಕಾಲೇಜುಗಳಿಗೆ ಒಂದು ವಿವಿ ಎಂಬಂತೆ ಆಗಿದೆ. ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ, ಹಾವೇರಿ, ಬೀದರ್ ಮತ್ತು ಬಾಗಲಕೋಟೆ ಮುಂತಾದ 7 ಹೊಸ ವಿವಿಗಳಿಗೆ ತಲಾ 2 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಮೊತ್ತದಲ್ಲಿ ವಿಶ್ವವಿದ್ಯಾನಿಲಯಗಳ ನಿರ್ಮಾಣವನ್ನು ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಯುವಿಸಿಇ ಅನ್ನು ಐಐಟಿ ಮಾದರಿ ಅಭಿವೃದ್ಧಿ, 7 ವಿವಿಧ ಎಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿ ಗಳಾಗಿ ಘೋಷಿಸಲಾಗಿದೆ. ಆದರೆ ಇದಕ್ಕೆ ಹಣಕಾಸು ವ್ಯವಸ್ಥೆಯನ್ನಾಗಲಿ, ಸ್ಪಷ್ಟ ಯೋಜನೆಯನ್ನಾಗಲಿ ರೂಪಿಸಿಲ್ಲ. ಬಾಯಿ ಮಾತಿನಿಂದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ತರಲು ಸಾಧ್ಯವಿಲ್ಲ. 1913ರಲ್ಲಿ ಆರಂಭವಾದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ)ನ ಐಐಟಿ ಮಾದರಿ ಅಭಿವೃದ್ಧಿ ಮಾಡುವುದಾಗಿ ಹೇಳಿ ಸರಿಯಾದ ಅನುದಾನ ನೀಡಿಲ್ಲ. ಇವೆಲ್ಲದರ ಪ್ರಗತಿ ಪರಿಶೀಲಿಸಲಾಗುತ್ತಿದೆ. ವಿಶ್ವೇಶ್ವರಯ್ಯ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಯುವಿಸಿಇ ಅನ್ನು ಅಭಿವೃದ್ಧಿ ಮಾಡುತ್ತೇವೆ ಎಂದರು.
ಕಾರು ಕೊಡಿಸುವಂತೆ ದುಂಬಾಲು ಬಿದ್ದ ವಿಸಿ
ಹೊಸ ವಿಶ್ವವಿದ್ಯಾನಿಲಯದ ಕುಲಪತಿಯೊಬ್ಬರು ತಾನು ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದು, ಕಾರು ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಬರೀ 2 ಕೋಟಿ ರೂ ನೀಡಿ ವಿವಿ ಸ್ಥಾಪಿಸಿದ್ದರಿಂದ ಈ ರೀತಿ ಆಗಿದೆ ಎಂದು ಡಾ| ಎಂ.ಸಿ.ಸುಧಾಕರ್ ಹೇಳಿದರು.