Advertisement

ಏಕಧರ್ಮ, ಏಕ ಸಂಸ್ಕೃತಿ ಹುನ್ನಾರ ವಿಜೃಂಭಿಸದಿರಲಿ: ಬರಗೂರು 

06:00 AM Nov 01, 2018 | Team Udayavani |

ಶಿಗ್ಗಾವಿ(ಗೊಟಗೋಡಿ): ನಮ್ಮದು ಬಹು ಸಂಸ್ಕೃತಿ, ಬಹು ಧರ್ಮಗಳ ದೇಶ. ಬಹುತ್ವವೇ ಭಾರತದ ಮೂಲಶಕ್ತಿ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಬೆಳವಣಿಗೆಗಳು ಭಾರತದ ಬಹುತ್ವಕ್ಕೆ ಧಕ್ಕೆ ತರುತ್ತಿವೆ. ಏಕಧರ್ಮ, ಏಕ ಸಂಸ್ಕೃತಿಯ ಹುನ್ನಾರಗಳು ವಿಜೃಂಭಿಸುತ್ತಿವೆ. ಇಂಥ ವಿಷಮ ಸನ್ನಿವೇಶಕ್ಕೆ ನಮ್ಮ ಜಾನಪದ ಉತ್ತರವಾಗಬಲ್ಲದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

Advertisement

ಬುಧವಾರ ನಡೆದ ಕರ್ನಾಟಕ ಜಾನಪದ ವಿವಿಯ ನಾಲ್ಕನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಧರ್ಮ, ಜಾತಿ, ರಾಜಕೀಯ ಪಕ್ಷಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಆದರೆ, ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಬಹು ಧಾರ್ಮಿಕತೆ, ಬಹುಸಂಸ್ಕೃತಿ ಜನಪದದಲ್ಲಿದೆ. ಜಾನಪದ ಬಹುಸಂಸ್ಕೃತಿಯ ಒಕ್ಕೂಟ. ಇಲ್ಲಿ ಏಕಧರ್ಮವಿಲ್ಲ. ಸಾಂಸ್ಥಿಕ ಧರ್ಮವೂ ಇಲ್ಲ. ಇಲ್ಲಿರುವುದು ಭಕ್ತಿ ಪ್ರಧಾನ ಧಾರ್ಮಿಕತೆ ಮಾತ್ರ. ಜಾನಪದದಲ್ಲಿ ಮಾನವೀಯ ಸಂಬಂಧ ಹಾಗೂ ಸಾಮರಸ್ಯಗಳಿಗೆ ಆದ್ಯತೆ ಇದೆಯೇ ಹೊರತು ಅಮಾನವೀಯತೆಯ ಸಂಘರ್ಷಕ್ಕಲ್ಲ. ಈ ದೃಷ್ಟಿಯಿಂದ
ಸಂಕುಚಿತ ಏಕಸಂಸ್ಕೃತಿ ಸ್ಥಾಪನೆಯ ಆಕ್ರಮಣಶೀಲತೆಗೆ ಜಾನಪದದ ಬಹುಸಂಸ್ಕೃತಿ, ಸಾಮರಸ್ಯ ಉತ್ತರವಾಗಬಲ್ಲದು ಎಂದರು.

ಅಭಿವೃದ್ಧಿಗೆ “ಕೊಕ್ಕೇಶ್ವರ’ರ ಕಾಟ: ಜಾನಪದ ವಿವಿ ವಿಶಿಷ್ಟ ವಿಶ್ವವಿದ್ಯಾಲಯ. ಇಲ್ಲಿ ಬೆವರಿನ ಸಂಸ್ಕೃತಿಯೇ ಮೂಲಧಾತು. ವಿವಿ, ಶ್ರಮ ಸಂಸ್ಕೃತಿಯ ಪ್ರತೀಕವಾಗಿ ಬೆಳೆಯಬೇಕೆಂದರೆ ಸರ್ಕಾರ ಇಂಥ ವಿವಿಗಳಿಗೆ ಸಾಕಷ್ಟು ಅನುದಾನ ಕೊಡಬೇಕು. ಆದರೆ, ವಿಧಾನಸೌಧದಲ್ಲಿ ಕೆಲಸ ಮಾಡಿಸಿಕೊಳ್ಳಲು ಹಲವರಿಗೆ ವೈರಾಗ್ಯ ಮೂಡಿದೆ. ಏಕೆಂದರೆ ಅಲ್ಲಿ “ಕೊಕ್ಕೇಶ್ವರರು’ ಜಾಸ್ತಿ ಇದ್ದಾರೆ.
“ಕೊಕ್ಕೇಶ್ವರ’ರನ್ನು ಗೆದ್ದು ಅನುದಾನ ತರುವ ಸಾಹಸ ಮಾಡಬೇಕಾಗಿರುವುದು ದುರಂತದ ಸಂಗತಿ ಎಂದರು. 

ವಿತ್ತದತ್ತ ವಿವಿ ಚಿತ್ತ: ವಿವಿಗಳು ಇಂದು “ವಿತ್ತ’ ವಿವಿಗಳಾಗಿ ಮಾರ್ಪಾಡಾಗಿವೆ. ವಿತ್ತ, ವಿವಿಗಳ ಪಿತ್ತ ಏರಿಸಿ ಬಿಟ್ಟಿವೆ. ವಿತ್ತವೇ ಉತ್ತಮವೆಂದು ತಿಳಿದ ಕೋರ್ಸ್‌ ಗಳಿಗೆ ಆದ್ಯತೆ ಸಿಗುತ್ತಿದೆ. ವಿವಿಗಳ ಗುರಿ ಶಿಕ್ಷಣ ಮಾರುಕಟ್ಟೆ ನಿರ್ಮಿಸುವುದಾಗಬಾರದು ಎಂದರು.
ಕುಲಪತಿ ಪ್ರೊ| ಡಿ.ಬಿ.ನಾಯಕ, ಕುಲಸಚಿವರಾದ ಚಂದ್ರಶೇಖರ್‌, ಡಾ| ಎಂ.ಎನ್‌.ವೆಂಕಟೇಶ, ವಿವಿ ಶೈಕ್ಷಣಿಕ ಪರಿಷತ್‌ ಶ್ರೀರಾಮ ಹಿಟ್ಟಣ್ಣನವರ ಇದ್ದರು.

ಡಾ| ಗೌರವ ಹೆಚ್ಚಿಸಿದೆ ಗೌರವ ಡಾಕ್ಟರೇಟ್‌ಗಳು ಗೌರವ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜಾನಪದ ವಿವಿ ಪ್ರತಿಭಾವಂತ ಕಲಾವಿದ ಟಿ.ಬಿ.ಸೊಲಬಕ್ಕನವರ್‌ ಅವರಿಗೆ ಗೌರವ ಡಾಕ್ಟರೇಟ್‌ ಕೊಟ್ಟು “ಗೌರವ ಡಾಕ್ಟರೇಟ್‌’ನ ಗೌರವ ಹೆಚ್ಚಿಸುವ ಕಾರ್ಯ ಮಾಡಿದೆ. ಸರ್ಕಾರ, ಪದವಿಯಲ್ಲಿ ಜನಪದವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆ ಮಾಡಬೇಕು. ಆಗ ಜನಪದ ಜ್ಞಾನವೂ ಉಳಿಯುತ್ತದೆ. ಅಧ್ಯಯನ ಮಾಡಿದವರಿಗೆ ಅಷ್ಟಾದರೂ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಬರಗೂರ ರಾಮಚಂದ್ರಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next