Advertisement
ತಾಲೂಕಿನ ತೀರ್ಥ ಗ್ರಾಮದ ಯುವ ರೈತ ಭೀಮರಾವ್ ಶಿವಲಾಲ ಪಾರಣೆ ಈ ಹೈನೋದ್ಯಮ ಸಾಧಕರು. ಇವರು ಓದಿದ್ದು ಪಿಯುಸಿ. ಉದ್ಯೋಗಕ್ಕಾಗಿ ಅರಸಿ ವಾಣಿಜ್ಯ ನಗರಕ್ಕೆ ದುಡಿಯಲು ಹೋಗಿ, ಇರುವ ಮೂರು ಎಕರೆ ಜಮೀನಿನಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯ ಎಂದು ಅನೇಕರು ಇವರಿಗೆ ಸಲಹೆ ನೀಡಿದ್ದರು. ಆದರೆ ಭೀಮರಾವ್ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವಿರತ ಶ್ರಮಿಸಿ, ಕುಟುಂಬಕ್ಕೆ ಆರ್ಥಿಕ ಹೊಳೆಯನ್ನೇ ಹರಿಸತೊಡಗಿದ್ದಾರೆ. ಅನೇಕರು ಹೈನೋದ್ಯಮ ಮಾಡಲು ಹೋಗಿ ಕೈಸುಟ್ಟುಕೊಂಡು ಸಾಲದ ಸುಳಿಗೆ ಸಿಲುಕಿದವರು ಸಾಕಷ್ಟು ಜನರಿದ್ದಾರೆ. ಇವರೆಲ್ಲರ ನಡುವೆ ಭೀಮರಾವ್ ಪ್ರೇರಕರಾಗಿ ನಿಂತುಕೊಂಡಿದ್ದಾರೆ.
Related Articles
Advertisement
ಪಶುಗಳಿಗೆ ತಮ್ಮ ಮೂರು ಎಕರೆಯಲ್ಲೇ ಸಂಪೂರ್ಣವಾಗಿ ಮೇವು ಬೆಳೆದು ಸಾಕಿದ 30 ಹಸುಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಹಾಲಿನ ಜೊತೆಗೆ ಸೆಗಣಿಯನ್ನು ಮಾರಾಟ ಮಾಡಿ ಪ್ರತಿವರ್ಷ 2ರಿಂದ 3 ಲಕ್ಷ ರೂ. ವರೆಗೆ ಆದಾಯ ಪಡೆಯುತ್ತಿದ್ದು, ಇನ್ನು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಕಲಬುರಗಿ ಜಿಲ್ಲಾ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಸಾಧನೆಗೆ ಬೀದರನಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕಿನಿಂದ ಕೃಷಿ ಪಂಡಿತ ಪ್ರಶಸ್ತಿ ಸೇರಿ ಹಲವು ಸಂಘ, ಸಂಸ್ಥೆಗಳಿಂದ ಹಾಗೂ ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಮರೆಯಲಾಗದ ಗೆಳೆಯನ ಸಹಾಯ
ನಾನು ಹೈನುಗಾರಿಕೆ ಮಾಡಲು ಗೆಳೆಯನೊಬ್ಬನ ಎದುರು ಪ್ರಸ್ತಾಪಿಸಿದಾಗ, ದೊಡ್ಡ ಪ್ರಮಾಣದಲ್ಲೇ ಮಾಡು ಎಂದು ಹಣದ ಸಹಾಯ ಮಾಡಿದ್ದರು. ಅದನ್ನು ಸದ್ಬಳಕೆ ಮಾಡಿಕೊಂಡು ನಾಲ್ಕು ಆಕಳು ಮತ್ತು ಹೊಲದಲ್ಲಿ ದನದ ಕೊಟ್ಟಿಗೆ ಶೆಡ್ ನಿರ್ಮಾಣ ಮಾಡಿ ಹೈನುಗಾರಿಕೆ ಆರಂಭಿಸಿದೆ. ಇದರಿಂದ ಆದಾಯ ಬರುತ್ತಿದ್ದಂತೆ ಎಲ್ಲವನ್ನೂ ವಿಸ್ತರಿಸಿ ಈಗ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಹಾಲು ಪೂರೈಸುವ ರೈತ ಎಂಬ ಹೆಸರಿದೆ. ಗೆಳೆಯ ನೀಡಿದ ಹಣ ಮರಳಿಕೊಟ್ಟಿದ್ದೇನೆ. ನಿರೀಕ್ಷಿತ ಗಳಿಕೆಯಲ್ಲಿ ಖುಷಿಯಾಗಿದ್ದೇನೆ ಎನ್ನುತ್ತಾರೆ ಹೈನೋದ್ಯಮಿ ಭೀಮರಾವ್ ಎಸ್. ಪಾರಣೆ.
ಮೂರು ಎಕರೆ ಹೊಲದಲ್ಲಿ 30 ಆಕಳು ಕಟ್ಟಿ ಹೈನುಗಾರಿಕೆಯಲ್ಲಿ ಮುಂ ದುವರಿದಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಸಮಯ, ಖರ್ಚು, ತಾಳ್ಮೆ ನೀಡಿದ್ದರಿಂದಲೇ ಆತನಿಗೆ ಆದಾಯ ಒಲಿದು ಬರುತ್ತಿದೆ. ಭೀಮರಾವ್ ಪಾರಾಣೆ ಹೈನುಗಾರಿಕೆಯಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಇವರಂತೆ ಯುವಕರು ಹೈನುಗಾರಿಕೆ ಕೈಗೊಳ್ಳಲು ಮುಂದೆ ಬರಬೇಕು. -ಡಾ| ಸಂಜಯ ರೆಡ್ಡಿ, ತಾಪಂ ಪ್ರಭಾರಿ ಇಒ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ, ಆಳಂದ
-ಮಹಾದೇವ ವಡಗಾಂವ