ವರದಿ: ಶಶಿಧರ್ ಬುದ್ನಿ
ಧಾರವಾಡ: ಶತಮಾನ ಕಂಡ ಕೆಲಗೇರಿ ಕೆರೆಯ ಬಾಹ್ಯ ಸೌಂದರ್ಯಕ್ಕಾಗಿ “ಅಮೃತ ಯೋಜನೆ’ಯಡಿ ಅಂತಿಮ ಹಂತದ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಇದೀಗ ಕೆರೆಯು ಹೊಸ ಕಳೆಯಲ್ಲಿ ಮತ್ತೆ ಕಣ್ಮನ ಸೆಳೆಯುವಂತಾಗಿದೆ.
ಮುಂಬೈ ಸರಕಾರದಲ್ಲಿ ಸ್ಯಾನಿಟರಿ ಎಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಕೆಲಗೇರಿ ಕೆರೆಯಿಂದ ಧಾರವಾಡ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 1908ರಲ್ಲಿ ಆರಂಭಿಸಿ 1911ರಲ್ಲಿ ಪೂರ್ಣಗೊಳಿಸಲಾಗಿತ್ತು ಎಂಬ ಇತಿಹಾಸ ಹೊಂದಿರುವ ಈ ಕೆರೆ ಶತಮಾನ ಕಂಡಿದೆ. ಒಟ್ಟು 159ಎಕರೆವ್ಯಾಪ್ತಿಯಈ ಕೆರೆಯನ್ನುಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಆಸಕ್ತಿಯಿಂದ ದರ್ಪಣ ಜೈನ್ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಕೋಟಿಗಟ್ಟಲೆ ಅನುದಾನ ವ್ಯಯಿಸಿ, ಅಭಿವೃದ್ದಿ ಮಾಡಲಾಗಿತ್ತು. ಈ ಅಭಿವೃದ್ಧಿ ಮಾಡಿದ ಕೆಲ ತಿಂಗಳಲ್ಲಿಯೇ ನಿರ್ವಹಣೆ ಕೊರತೆಯಿಂದ ಹಾಳಾಗಿತ್ತು. ಕೆರೆಯ ಸುತ್ತಲೂ ನಿರ್ಮಿಸಿದ್ದ ಫುಟ್‌ಪಾತ್, ತಂಗುದಾಣಗಳು ಹಾಳಾಗಿದ್ದವು. ಇದೀಗ ಅಮೃತ ಯೋಜನೆಯಡಿ ಮತ್ತೆ ಕೆರೆಯ ಸೌಂದರ್ಯಕ್ಕೆ ಹೊಸ ರೂಪ ನೀಡುವ ಕಾರ್ಯ ಸಾಗಿದೆ.
ಕೆರೆಯ ಅಭಿವೃದ್ಧಿಗೆ ಅಮೃತ: ಈ ಕೆರೆಯ ಅಭಿವೃದ್ಧಿಗಾಗಿ ಈ ಹಿಂದೆ ಡಿಸಿಯಾಗಿದ್ದ ದೀಪಾ ಚೋಳನ್ ಅವರು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿಪ್ರವಾಸಿತಾಣವನ್ನಾಗಿಸಲುಯೋಜಿಸಲಾಗಿತ್ತು. ಆದರೆ ಇದು ಅನುಷ್ಠಾನ ಮಾತ್ರ ಕಾಣಲೇ ಇಲ್ಲ.ಕೊನೆಗೆ ಕೆರೆಯ ಅಭಿವೃದ್ಧಿಗಾಗಿ ಅಮೃತ ಯೋಜನೆಯ ಹಸಿರು ವಲಯ ಅಭಿವೃದ್ಧಿ ವಲಯದಿಂದ2 ಕೋಟಿ 5ಲಕ್ಷ ರೂ. ಅನುದಾನ ಲಭಿಸಿತ್ತು. ಈ ಅನುದಾನದಡಿ ಕಾಮಗಾರಿಗೆ 2019 ರಲ್ಲಿ ಈಗಿನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದ್ದರು. ಕೆರೆಯ ಬಾಹ್ಯ ಸೌಂದರ್ಯಕ್ಕಾಗಿ ನಡೆದ ಈ ಕಾಮಗಾರಿ ಕೋವಿಡ್ ಹಿನ್ನೆಲೆಯಲ್ಲಿ ಆಮೆಗತಿಯಲ್ಲಿ ಸಾಗಿತ್ತು. ಆದರೆ ಇದೀಗ ಈ ಕಾಮಗಾರಿಗೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಹೀಗಾಗಿ ಕೆರೆ ಸೌಂದರ್ಯದ ಕಳೆ ಹೆಚ್ಚುವತ್ತ ಸಾಗಿದ್ದು, ಇದು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದೆ.
ಹೆಚ್ಚಿದಕೆರೆಯ ಅಂದ- ಚಂದ: ಕೆರೆಯಿಂದ ನೀರು ಹೊರ ಹೋಗುವ ಮಾರ್ಗವನ್ನು ಉನ್ನತೀಕರಣ ಮಾಡಿದ್ದು, 5 ಮೀಟರ್ ನಿಂದ 10 ಮೀಟರ್ ಗೆ ಅಗಲೀಕರಣ ಮಾಡಲಾಗಿದೆ. ಕೆರೆ ಅಂದ ಹೆಚ್ಚಿಸಲು ಹಾಗೂ ವಾಯು ವಿಹಾರಿಗಳ ಅನುಕೂಲಕ್ಕಾಗಿ ಕೆರೆಯ ಸುತ್ತ ಫುಟ್‌ಪಾತ್ ನಿರ್ಮಿಸಿದ್ದು, ಇದರ ಅಗಲವನ್ನೂಈಸಲ ಹೆಚ್ಚಿಸಲಾಗಿದೆ. ಇದರ ಜತೆಗೆ ಮಕ್ಕಳ ಆಟಿಕೆ ಹಾಗೂ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಒಟ್ಟು 20ಕ್ಕೂ ಹೆಚ್ಚು ಪರಿಕರಗಳನ್ನು ಅಳವಡಿಸಿದ್ದು, ದೇಹದ ಸದೃಢತೆಯ ವ್ಯಾಯಾಮ ಮಾಡಲು ಪೂರಕವಾಗಿದೆ. ಇದಲ್ಲದೇ ಮಕ್ಕಳು ಮೋಜು ಮಸ್ತಿಯಿಂದ ಆಡಲು ಆಟಿಕೆ ಸಾಮಗ್ರಿಗಳನ್ನೂಅಳವಡಿಸಲಾಗಿದೆ. ಸದ್ಯ ನೀಡಿದ್ದ ಅನುದಾನದಲ್ಲಿ ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.
ನಿರ್ವಹಣೆ ಕೊರತೆ ಆಗದಿರಲಿ: ಈ ಹಿಂದೆ ಕೋಟಿಗಟ್ಟಲೇ ಅನುದಾನ ಬಳಸಿ ಅಭಿವೃದ್ಧಿ ಮಾಡಿದರೂ ನಿರ್ವಹಣೆ ಕೊರತೆಯಿಂದ ಹಾಳಾಗಿತ್ತು. ಆದರೆ ಇದು ಮರುಕಳಿಸದಿರಲಿ. ಈ ಕೆರೆಗೆ ಹು-ಧಾ ಮಹಾನಗರ ಪಾಲಿಕೆ ಹಾಗೂ ಕೃಷಿ ವಿವಿ ಮಾಲೀಕತ್ವ ಹಾಗೂ ನಿರ್ವಹಣೆ ಹೊಣೆ ಇದೆ. ಆದರೆ ನಿರ್ವಹಣೆ ಕೊರತೆ ಹಾಗೂ ಭದ್ರತಾ ಸಿಬ್ಬಂದಿಗಳ ನೇಮಕ ಆಗದ ಕಾರಣ ಈ ಕೆರೆಯ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ನಡೆಯುವಂತಾಗಿದೆ. ಇದಲ್ಲದೇ ಜನರೂ ದೇವರ ಪೂಜಾ ಸಾಮಗ್ರಿ ಸೇರಿದಂತೆ ತಾಜ್ಯ ಇಲ್ಲಿಯೇ ಹಾಕುವ ಕಾರಣ ಕೆರೆಯ ಅಂದ ಹಾಳಾಗುತ್ತಿದ್ದು, ಹೀಗಾಗಿ ಈ ಸಲವಾದರೂ ಕೆರೆಯ ನಿರ್ವಹಣೆಯತ್ತ ಸಂಬಂಧಪಟ್ಟವರು ಲಕ್ಷé ಹರಿಸಬೇಕಿದೆ.
ಅಧಿಕ ನೀರು ಸಂಗ್ರಹದ ಆತಂಕ: ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದ್ದು, ಮೀನುಗಾರರ ಅನುಕೂಲಕ್ಕಾಗಿ ಕೆರೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಕೆರೆಗೆ ಇಂತಿಷ್ಟೇ ಪ್ರಮಾಣದ ನೀರು ಸಂಗ್ರಹ ಮಾಡಲು ಮಿತಿಯ ಗುರುತು ಇದ್ದು, ಇದು ದಾಟಿದಾಗ ನೀರು ಹೊರಗಡೆ ಬಿಡುವ ಮಾರ್ಗವಿದೆ. ಆದರೆ ಮೀನುಗಾರಿಕೆ ದೃಷ್ಟಿಯಿಂದ ನೀರು ಸಂಗ್ರಹ ಪ್ರಮಾಣ ಮಿತಿ ಮೀರುತ್ತಿರುವ ಕಾರಣ ಕೆರೆಯ ಮುಂಭಾಗದ ರಸ್ತೆಗಳು ಕುಸಿಯುವ ಸ್ಥಿತಿ ನಿರ್ಮಾಣ ಆಗಿದೆ. ಇದಲ್ಲದೇ ಆ ಭಾಗದ ತಗ್ಗು ಪ್ರದೇಶದ ಜನರ ಆತಂಕಕ್ಕೂ ಕಾರಣವಾಗಿದೆ. ಹೀಗಾಗಿ ಕೆರೆಯ ನೀರಿನ ಸಂಗ್ರಹ ಪ್ರಮಾಣ ಏರಿಕೆ ಮಾಡಬಾರದು ಎಂಬುದು ಸ್ಥಳೀಯ ನಿವಾಸಿಗಳ ಒತ್ತಾಸೆ.