Advertisement
ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಕೇಂದ್ರ ಸರ್ಕಾರದ ‘ತೀರ್ಥಯಾತ್ರೆಗಳ ಪುನಶ್ಚೇತನ ಮತ್ತು ಆಧ್ಯಾತ್ಮ, ಪಾರಂಪರಿಕ ವರ್ಧನೆಯ ಯೋಜನೆ (ಪ್ರಸಾದ್)’ ಅಡಿ ೧೧೦ ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದಿಂದ ಅನುದಾನ ಲಭಿಸುವ ಭರವಸೆ ಸಿಕ್ಕಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಕಾಣಲಿದೆ. ಇನ್ನು ಎರಡು ತಿಂಗಳ ಹಿಂದೆಯೇ ವಾಸ್ತು ಶಿಲ್ಪಿಯೊಬ್ಬರ ತಜ್ಞರ ತಂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೂತನ ಯೋಜನೆಯನ್ನು ರೂಪಿಸಿಕೊಟ್ಟಿದೆ.
ದೇಗುಲದ ಬಳಿ ಇರುವ ಅಂಗಡಿ ಮುಂಗಟ್ಟುಗಳನ್ನು ತೆರೆವುಗೊಳಿಸಿ ಅವರಿಗಾಗಿ ಹೈಟೆಕ್ ಮಾದರಿಯ ಮಳಿಗೆ ತಲೆ ಎತ್ತಲಿದೆ. ದೇವಸ್ಥಾನದ ಎದುರಿರುವ ಭಜನೆ ಮಂಟಪ, ದೇವಸ್ಥಾನದ ಎಡಬದಿಯಲ್ಲಿ ಪ್ರಾಕಾರ ಆವರಣ ನಿರ್ಮಾಣ, ಮಹಾಬಲೇಶ್ವರ ದೇವಸ್ಥಾನ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ ಸಿಗಲಿದೆ.
Related Articles
Advertisement
ಮಹಿಷಾಸುರ ಪ್ರತಿಮೆ ಬಳಿ ಬೃಹತ್ತಾದ ವಿಜಯನಗರ ಮಾದರಿಯಲ್ಲಿ ರಾಜಗೋಪುರ ನಿರ್ಮಾಣವಾಗಲಿದೆ. ಜತೆಗೆ ಚಾಮುಂಡೇಶ್ವರಿ ದೇಗುಲಕ್ಕೆ ಹೋಗುವ ಮಾರ್ಗವನ್ನು ವಿಶೇಷವಾಗಿನಿರ್ಮಿಸಲಾಗುತ್ತದೆ. ಅಲ್ಲದೆ, ಪಾದಚಾರಿಗಳ ವಿಶೇಷ ಪಥ ನಿರ್ಮಿಸಿ ದರ್ಶನ ಪಡೆಯಲು ಅನುಕೂಲವಾಗುವಂತೆ ಮಾರ್ಗ ವಿನ್ಯಾಸಗೊಳ್ಳಲಿದೆ. ನಂದಿ ವೀಕ್ಷಣೆಗೆ ಅನುಕೂಲ ಇನ್ನು ನೂರಾರು ವರ್ಷಗಳ ಇತಿಹಾಸವಿರುವ ಬೃಹತ್ ನಂದಿ ವಿಗ್ರಹದ ವೀಕ್ಷಣೆಗಾಗಿ ನಂದಿ ಸುತ್ತಲೂ ವೀಕ್ಷಣಾ ತಾಣ ನಿರ್ಮಾಣಗೊಳ್ಳಲಿದ್ದು, ಭಕ್ತರ ವೀಕ್ಷಣಾ ತಾಣ ಮೇಲೆ ನಿಂತು ನಂದಿಯನ್ನು ನೋಡಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಮಾರ್ಗವನ್ನೂ ವಿನ್ಯಾಸಗೊಳಿಸಲಾಗಿದೆ. ಈಗಿರುವ ಹಳೆಯ ಗೋಪುರಕ್ಕೆ ನಾವೀನ್ಯತೆ ನೀಡಿ ಎರಡೂ ಬದಿಯಲ್ಲೂ ದಿಬ್ಬಣ ನಿರ್ಮಿಸಿ ಮೆಟ್ಟಿಲುಗಳನ್ನು ಬದಲಿಸಲಾಗುತ್ತದೆ. ದೇವಿಕೆರೆ ಅಭಿವೃದ್ಧಿ
ಈ ಯೋಜನೆಯಡಿ ದೇವಸ್ಥಾನದ ಸಮೀಪ ಇರುವ ದೇವಿಕೆರೆಯ ಅಭಿವೃದ್ಧಿಗೂ ಯೋಜನೆ ಸಿದ್ಧಪಡಿಸಲಾಗಿದೆ.
ಕೆರೆ ಸುತ್ತಲೂ ದೀಪಾಲಂಕಾರ, ಬೃಂದಾವನ ಗಾರ್ಡನ್ ನಿರ್ಮಾಣ ಮಾಡಲಾಗುತ್ತದೆ. ವ್ಯು ಪಾಯಿಂಟ್
ನಂದಿ ಮಾರ್ಗಕ್ಕೆ ಹೋಗುವ ವೃತ್ತದ ಬಳಿ ಇರುವ ವ್ಯು ಪಾಯಿಂಟ್ ಜಾಗದಲ್ಲಿ ಪಾರಂಪರಿಕ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗುತ್ತದೆ. ಇಲ್ಲಿ ಇಡಲಾಗುವ ದೂರದರ್ಶಕಗಳ ಮೂಲಕ ಪ್ರವಾಸಿಗರು ಇಡೀ ಮೈಸೂರಿನ ವಿಹಂಗಮ ನೋಟವನ್ನು ಕಣ್ಣು ತುಂಬಿಕೊಳ್ಳಬಹುದು. ಜತೆಗೆ ಚಾಮುಂಡೇಶ್ವರಿ ದೇವಸ್ಥಾನದಿಂದ ಅಣತಿದೂರದಲ್ಲಿರುವ ದೇವಿಕೆರೆಯ ಸಮಗ್ರ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಮೂಲಕ ಇಡೀ ಬೆಟ್ಟದ ಚಿತ್ರಣ ಹಾಗೂ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ತಿಳಿಸಿಕೊಡಲಾಗುತ್ತದೆ. ಮೈಸೂರು ಸಂಸ್ಥಾನದ ಒಡೆಯರ್ ಇತಿಹಾಸದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಬೆಟ್ಟಕ್ಕೆ ಸಾರ್ವಜನಿಕ ರನ್ನು ಕರೆದೊಯ್ಯಲು ಎಲೆಕ್ಟ್ರಿಕ್ ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ಇಡೀ ಭಾರತದಲ್ಲಿಯೇ ಶೂನ್ಯ ತ್ಯಾಜ್ಯ ವಾತಾವರಣ ಹಾಗೂ ಜೀರೋ ಕಾರ್ಬನ್ ಎಮಿಷನ್ ವಾತಾವರಣ ದ ಕ್ಯಾಂಪಸ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ.ದೇವಾಲಯದಲ್ಲಿ ಸಂಗ್ರಹವಾಗುವ ಹೂವಿನ ರಾಶಿ ಸಂಸ್ಕರಣೆ, ಸೌರಶಕ್ತಿಯಿಂದ ದೀಪ ಬೆಳಗುವಿಕೆ, ಜೈವಿಕ ಅನಿಲ ಉತ್ಪಾದನೆ ಹಾಗೂ ಅಂತರ್ಜಲ ಮರುಪೂರ್ಣ ಇಂಗುಗುಡಿಗಳ ನಿರ್ಮಾಣವಾಗಲಿದೆ. ರೂಪುರೇಷೆ ಬಗ್ಗೆ ಮೆಚ್ಚುಗೆ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ಬಳಿ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಸಿದ್ಧಪಡಿಸಿರುವ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಸಚಿವರೂ ಆದ ಆನಂದ್ ಸಿಂಗ್ ಯೋಜನೆಯ ರೂಪುರೇಷೆ ವರದಿಯನ್ನು ಸಲ್ಲಿಸಿದ್ದರು.
ಖುದ್ದು ಸಚಿವರೇ ಕೇಂದ್ರ ಪ್ರವಾಸೋದ್ಯಮ ಹಿರಿಯ ಅಧಿಕಾರಿಗಳ ಬಳಿ ಯೋಜನೆಯ ರೂಪುರೇಷೆಯನ್ನು ಮುಂದಿಟ್ಟರು. ಯೋಜನೆಯ ರೂಪುರೇಷೆ ಬಗ್ಗೆ ಸಚಿವರು ಹಾಗೂ ಕೇಂದ್ರದ ಅಧಿಕಾರಿಗಳು ಒಳಗೊಂಡಂತೆ ನೆರೆ ರಾಜ್ಯ ತೆಲಂಗಾಣ ಹಾಗೂ ಆಂಧ್ರ ರಾಜ್ಯದ ಸಚಿವರು ಹರ್ಷ ವ್ಯಕ್ತಪಡಿಸಿದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಚಾಮುಂಡಿ ಬೆಟ್ಟದ ಸಂಪೂರ್ಣ ಆಧುನೀಕರಣಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ಹಂಪಿ ಮಾದರಿಯ ರಾಜಗೋಪುರ ಸೇರಿದಂತೆ ಹಲವು ರೀತಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಹೊಸರೂಪ ನೀಡಲಾಗುತ್ತದೆ. ತಜ್ಞರ ಸಲಹೆ ಪಡೆದು ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರ ಅನುದಾನ ದೊರಕುವ ಭರವಸೆಯನ್ನು ಕೇಂದ್ರ ಸಚಿವ ಕಿಶನ್ ರೆಡ್ಡಿ ನೀಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೊಸ ಸ್ಪರ್ಶ ನೀಡುವ ಯೋಜನೆಯನ್ನು ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ವೀಕ್ಷಿಸಿದ ನೆರೆಯ ತೆಲಂಗಾಣ, ಆಂಧ್ರ ಹಾಗೂ ತಮಿಳುನಾಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಆನಂದ್ ಸಿಂಗ್, ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವರು