Advertisement

ಗುಜರಿ ಬಸ್‌ ಬಳಸಿ ಹೈಟೆಕ್‌ ಶೌಚಾಲಯ; ಕೆಎಸ್ಸಾರ್ಟಿಸಿಯಿಂದ ಪ್ರಯೋಗ

10:23 PM Sep 04, 2020 | mahesh |

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಯಡಿ ಕೆಎಸ್ಸಾರ್ಟಿಸಿ ನಿರು ಪಯುಕ್ತ ಬಸ್‌ಗಳನ್ನು ಬಳಸಿಕೊಂಡು ಕರಾವಳಿ ಭಾಗದಲ್ಲಿಯೂ “ಸ್ತ್ರೀ ಶೌಚಾ ಲಯ’ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿ ಮುಂದಾಗಿದೆ. ಅದರಂತೆಯೇ ಉಭಯ ಜಿಲ್ಲೆಗಳ ಕೆಎಸ್ಸಾರ್ಟಿಸಿ ಘಟಕ ವ್ಯಾಪ್ತಿ ಸಹಿತ ಗ್ರಾಮ ಮಟ್ಟದಲ್ಲಿಯೂ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

Advertisement

ಕೆಎಸ್ಸಾರ್ಟಿಸಿ ನಿರುಪಯುಕ್ತ ಬಸ್‌ ಬಳಸಿಕೊಂಡು ಮೊದಲನೇ ಹಂತದಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ ಕೆಎಸ್ಸಾರ್ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣದ ಒಂದನೇ ಟರ್ಮಿನ್‌ನ ಪ್ರವೇಶ ದ್ವಾರದ ಸಮೀಪ ಈ ವಿಶಿಷ್ಟ ಶೌಚಾಲಯದ ಸಾರ್ವಜನಿಕ ಬಳಕೆಗೆ ಲಭ್ಯವಿದೆ. 12 ಲಕ್ಷ ರೂ. ವೆಚ್ಚದಲ್ಲಿ ಬಿಐಎಎಲ್‌ ಸಿಎಸ್‌ಆರ್‌ ಯೋಜನೆಯಡಿ ಹಳೆಯ ಬಸ್‌ ಅನ್ನು ಹೈಟೆಕ್‌ ಶೌಚಾಲಯವಾಗಿ ಪರಿವರ್ತಿಸಲಾಗಿದೆ.

ನಿರುಪಯುಕ್ತ ಬಸ್‌ಗಳನ್ನು ಶೌಚಾ ಲಯವಾಗಿ ಪರಿವರ್ತನೆ ಮಾಡುವ ಕೆಎಸ್ಸಾರ್ಟಿಸಿ ನಿರ್ಧಾಕ್ಕೆ ಕೆಲವೊಂದು ಸಂಘ – ಸಂಸ್ಥೆಗಳು ಕೂಡ ಕೈಜೋಡಿಸುತ್ತಿವೆ. ಕೇಂದ್ರ ಕಚೇರಿಯ ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವಂತೆ ಸದ್ಯ ರೋಟರಿ ಮತ್ತು ಸುಲಭ್‌ ಶೌಚಾಲಯ ಸಂಸ್ಥೆ ಮುಂದೆ ಬಂದಿದೆ. ಅವರಿಗೆ ಅಂದಾಜು ವೆಚ್ಚದ ವರದಿಯನ್ನು ಕೂಡ ಕೆಎಸ್ಸಾರ್ಟಿಸಿ ನೀಡಿದೆ. ರಾಜ್ಯದ ಇತರ ಭಾಗದಲ್ಲಿ ಶೌಚಾಲಯ ನಿರ್ಮಾಣದ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತಿತರ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಕೆಎಸ್ಸಾರ್ಟಿಸಿ ಈಗಾಗಲೇ ಬಸ್‌ಗಳಲ್ಲಿ ಮಾರ್ಪಾಡು ಮಾಡಿ ಕೊರೊನಾ ಮೊಬೈಲ್‌ ಫೀವರ್‌ ಕ್ಲೀನಿಕ್‌ ನಿರ್ಮಾಣ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದು ಸಂಚರಿಸುತ್ತಿದೆ. ಇನ್ನು ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಬಸ್‌ ಒಂದರಲ್ಲಿ ಆಸನ ಮಾರ್ಪಾಡು ವ್ಯವಸ್ಥೆ ಕೂಡ ಜಾರಿಗೆ ತಂದಿದೆ. ಮಂಗಳೂರು ಸಹಿತ ರಾಜ್ಯದ ಇನ್ನಿತರ ಘಟಕದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಯಂತ್ರ ಸ್ಥಾಪನೆ ಮಾಡಲಾಗಿದೆ.

ಏನಿರಲಿದೆ?
ಕೆಎಸ್ಸಾರ್ಟಿಸಿ ಹಳೆಯ ಬಸ್‌ ಅನ್ನು ಹೈಟೆಕ್‌ ಶೌಚಾಯವನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಸುಮಾರು 12 ಮೀಟರ್‌ ಉದ್ದದ ಬಸ್‌ ಇದಾಗಿರಲಿದೆ. ಸಾಮಾನ್ಯ ಬಸ್‌ಗಳಲ್ಲಿ ಇರುವ ಎಂಜಿನ್‌, ಸೀಟುಗಳು, ಸ್ಟೇರಿಂಗ್‌, ಬ್ರೇಕ್‌ ಸಹಿತ ಎಲ್ಲವನ್ನೂ ತೆರೆವುಗೊಳಿಸಲಾಗುತ್ತದೆ. ಈಗಾಗಲೇ ನಿರ್ಮಾಣವಾದ ಬಸ್‌ನಲ್ಲಿ ಎರಡು ಪಾಶ್ಚಾತ್ಯ ಶೈಲಿಯ ಶೌಚಾಲಯ ಮತ್ತು ಮೂರು ಭಾರತೀಯ ಶೈಲಿಯ ಶೌಚಾಲಯ ಇದೆ. ಮಕ್ಕಳಿಗೆ ಎದೆ ಹಾಲು ಉಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕೈತೊಳೆಯುವ ಬೇಸಿನ್‌, ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಯಂತ್ರ, ಮಕ್ಕಳಿಗೆ ಡೈಪರ್‌ ಬದಲಾಯಿಸಲು ಪ್ರತ್ಯೇಕ ಸ್ಥಳ ಸಹಿತ ಅನೇಕ ವೈಶಿಷ್ಟ್ಯ ಹೊಂದಿರಲಿದೆ. ಮೂತ್ರ ವಿಸರ್ಜನೆ ಉಚಿತವಾಗಿದ್ದು, ಮಲ ವಿಸರ್ಜನೆಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.

Advertisement

ಬಸ್‌ ನೀಡಲು ಕೆಎಸ್ಸಾರ್ಟಿಸಿ ಸಿದ್ಧ
ಕೆಎಸ್ಸಾರ್ಟಿಸಿ ನಿರುಪಯುಕ್ತ ಬಸ್‌ ಬಳಸಿಕೊಂಡು ಸ್ತ್ರೀಯರಿಗಾಗಿ ಶೌಚಾಲಯ ನಿರ್ಮಾಣ ಮಾಡ ಲಾಗುತ್ತಿದೆ. ಮೊದಲನೇ ಹಂತದಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ನಿರು ಪಯುಕ್ತ ಬಸ್‌ನಲ್ಲಿ ಶೌಚಾಲಯ ನಿರ್ಮಾಣಕ್ಕೆ ಯಾವುದೇ ಸಂಸ್ಥೆ, ಸಂಘಟನೆ ಮುಂದೆ ಬಂದರೂ ಬಸ್‌ ನೀಡಲು ಕೆಎಸ್ಸಾರ್ಟಿಸಿ ತಯಾರಿದೆ.
– ಬಸವರಾಜು, ಕೆಎಸ್ಸಾರ್ಟಿಸಿ ಚೀಫ್‌ ಮೆಕ್ಯಾನಿಕಲ್‌ ಎಂಜಿನಿಯರ್‌, ಬೆಂಗಳೂರು

-  ನವೀನ್‌ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next