Advertisement

ಹಳ್ಳಿಶಾಲೆಗಳಿಗೆ ಹೈಟೆಕ್‌ ರೂಪ; 9 ಶಾಲೆಗಳು ಆಯ್ಕೆ

06:17 PM Nov 08, 2021 | Team Udayavani |

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣ ಪ್ರೌಢಶಾಲೆಗಳಿಗೆ ಹೈಟೆಕ್‌ ರೂಪ ನೀಡುವ ಮೂಲಕ ಹಳ್ಳಿ ಮಕ್ಕಳಿಗೂ ಅತ್ಯುತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಮುನ್ನುಡಿ ಇಟ್ಟಿದ್ದು, ಇದಕ್ಕಾಗಿ ಮಾದರಿ ಶಾಲೆಗಳಾಗಿ ಪರಿವರ್ತಿಸಲು ಜಿಲ್ಲೆಯ 9 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

Advertisement

ಹೌದು. ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ, ಬಾದಾಮಿಯ ಚಿಕ್ಕಮುಚ್ಚಳಗುಡ್ಡ, ಗುಳೇದಗುಡ್ಡ ತಾಲೂಕಿನ ಹಂಗರಗಿ, ಹುನಗುಂದ ತಾಲೂಕಿನ ಕೂಡಲಸಂಗಮ, ಬೀಳಗಿ ತಾಲೂಕಿನ ಹೆಗ್ಗೂರ, ಮುಧೋಳದ ಸೋರಗಾವಿ, ಜಮಖಂಡಿಯ ಮೈಗೂರ, ಇಳಕಲ್ಲನ ಬಲಕುಂದಿ, ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳನ್ನು ಮಾದರಿ ಸ್ಕೂಲ್‌ ಯೋಜನೆಗೆ ಆಯ್ಕೆ ಮಾಡಲಾಗಿದೆ.

ಮಾದರಿ ಸ್ಕೂಲ್‌ ಉದ್ದೇಶವೇನು?: ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರೌಢ ಶಿಕ್ಷಣದ ಬಗ್ಗೆ ಆಸಕ್ತಿ, ಪ್ರೇರಣೆ ನೀಡುವ ಜತೆಗೆ ಆಯಾ ಶಾಲೆಗಳು, ನಗರ ಮಟ್ಟದ ಶಾಲೆಗಳಂತೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರಬೇಕು ಎಂಬುದು ಜಿಪಂ ಸಿಇಒ ಟಿ. ಭೂಬಾಲನ್‌ ಒಳಗೊಂಡ ಹಿರಿಯ ಅಧಿಕಾರಿಗಳ ಆಶಯ. ಹೀಗಾಗಿ ಮಾದರಿ ಶಾಲೆ ನಿರ್ಮಾಣಕ್ಕಾಗಿ ವಿಶೇಷ ಯೋಜನೆಯಡಿ ಅನುದಾನ ಒದಗಿಸಲು ಸದ್ಯಕ್ಕೆ ಅವಕಾಶವಿಲ್ಲದ ಕಾರಣ ಇರುವ ಅನುದಾನದಲ್ಲೇ ಅವಕಾಶ ಮಾಡಿಕೊಂಡು ಜಿಲ್ಲೆಯಲ್ಲೇ ಮೊದಲ ಬಾರಿಗೆ “ಮಾದರಿ ಸ್ಕೂಲ್‌’ ಪ್ರಯೋಗ ಆರಂಭಿಸಲಾಗಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ತೋಟಗಾರಿಕೆ, ಶಿಕ್ಷಣ ಇಲಾಖೆ ಹಾಗೂ ಜಿಪಂನಿಂದ ಉತ್ಸಾಹದ ಮುನ್ನುಡಿ ಸಿಕ್ಕಿದ್ದು, ಇದು ಗ್ರಾಪಂ ಮಟ್ಟದಲ್ಲೂ ವೇಗದ ಪ್ರಕ್ರಿಯೆ ನಡೆಯಬೇಕಿದೆ ಎಂಬ ಮಾತು ಕೇಳಿ ಬಂದಿದೆ.

ಯಾವ ಸೌಲಭ್ಯ?: ಮಾದರಿ ಸ್ಕೂಲ್‌ನಡಿ ಆಯ್ಕೆ ಮಾಡಿಕೊಂಡ ಪ್ರತಿಯೊಂದು ಶಾಲೆ ಸುತ್ತಲೂ ಸುಸಜ್ಜಿತ ಕಾಂಪೌಂಡ್‌ (ಈಗಾಗಲೇ ಕಾಂಪೌಂಡ್‌ ಇದ್ದರೆ ಅದನ್ನು ಎತ್ತರಿಸುವ ಕಾರ್ಯ ಸೇರಿ) ನಿರ್ಮಾಣ, ಮಧ್ಯಾಹ್ನ ಬಿಸಿಯೂಟ ಸೇವಿಸಲು ಶಿಕ್ಷಕರು, ಮಕ್ಕಳು ಒಂದೆಡೆ ಕುಳಿತು ಊಟ ಮಾಡಲು ಸುಂದರ ಡೈನಿಂಗ್‌ ಹಾಲ್‌, ನ್ಯೂಟ್ರಿಶಿಯನ್‌ ತರಕಾರಿ ಒಳಗೊಂಡ ಗಾರ್ಡನ್‌, ಸುಸಜ್ಜಿತ ಶೌಚಾಲಯ, ಮಕ್ಕಳಿಗೆ ಕ್ರೀಡಾಸಕ್ತಿ ಉತ್ತೇಜಿಸಲು ಪ್ಲೇ ಗ್ರೌಂಡ್‌, ಕಬಡ್ಡಿ, ಖೋಖೋ, ವಾಲಿಬಾಲ್‌ ಆವರಣ ನಿರ್ಮಾಣ ಹೀಗೆ ಹಲವು ಕಾಮಗಾರಿ ನಡೆಸಲಾಗುತ್ತಿದೆ.

ಇದರಿಂದ ಮಕ್ಕಳು ಶಾಲೆ ಆವರಣಕ್ಕೆ ಕಾಲಿಟ್ಟರೆ ಸಾಕು, ಇಡೀ ದಿನ ಕಲಿಕೆ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯ, ಉತ್ತಮ ಗುಣಮಟ್ಟದ ತರಕಾರಿ(ಬಿಸಿಯೂಟಕ್ಕೆ ಬಳಸುವ)ಎಲ್ಲವೂ ಶಾಲೆ ಆವರಣದಲ್ಲಿ ದೊರೆಯಬೇಕು. ಈ ಕುರಿತು ಅವರಲ್ಲಿ ಆಸಕ್ತಿಯೂ ಮೂಡಿಸಬೇಕೆಂಬುದು ಯೋಜನೆಯ ಉದ್ದೇಶ. ಈ ನಿಟ್ಟಿನಲ್ಲಿ ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಕೆಲಸ ನಡೆಯುತ್ತಿವೆ. ನ್ಯೂಟ್ರಿಶಿಯನ್‌ ಗಾರ್ಡನ್‌: ಈಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ಸಿಗದೇ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಬಿಸಿಯೂಟಕ್ಕೆ ಬಳಸುವ ತರಕಾರಿ ಕೂಡ ಹೊರಗಿನಿಂದ ಖರೀದಿಸಲಾಗುತ್ತಿದೆ.

Advertisement

ಹೀಗಾಗಿ ಶಾಲೆ ಆವರಣದಲ್ಲೇ ಅತ್ಯುತ್ತಮ ಪೋಷಕಾಂಶ ಇರುವ ತರಕಾರಿ, ಗಡ್ಡೆ-ಗೆಣಸು, ಪಾಲಕ್‌ ಹೀಗೆ ಹಲವು ತರಕಾರಿ ಬೆಳೆಯಬೇಕು. ಅತ್ಯುತ್ತಮ ಕೈತೋಟ ನಮ್ಮ ಶಾಲೆಯಲ್ಲಿರಬೇಕು ಎಂಬ ಉದ್ದೇಶದಿಂದ ನ್ಯೂಟ್ರಿಶಿಯನ್‌ ಗಾರ್ಡನ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ರಮೇಶ ಭಜಂತ್ರಿ “ಉದಯವಾಣಿ’ಗೆ ತಿಳಿಸಿದರು.

ನಮ್ಮ ಶಾಲೆಯಲ್ಲಿ ಈಗಾಗಲೇ ಸುಮಾರು 17ಲಕ್ಷ (ಎನ್‌ಆರ್‌ಇಜಿ ಅಡಿ 6 ಲಕ್ಷ, ಶಿಕ್ಷಣ ಇಲಾಖೆಯ 11 ಲಕ್ಷ) ಮೊತ್ತದಲ್ಲಿ ಡೈನಿಂಗ್‌ ಹಾಲ್‌ ನಿರ್ಮಾಣ ಕಾರ್ಯ ನಡೆದಿದ್ದು, ಅದು ಸದ್ಯ ಪ್ಲಿಂತ್‌ ಲೇವಲ್‌ ಇದೆ. ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸುವ ಕಾರ್ಯ ನಡೆದಿದೆ. ಮುಖ್ಯವಾಗಿ ಶಾಲೆಯಲ್ಲಿ ಹಲವು ಕೆಲಸ ಮಾಡಲು ಯೋಜನೆ ರೂಪಿಸಿ, ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಖಜಗಲ್ಲ ಗ್ರಾಮದ ಎದುರಿನ ಕೂಡಲಸಂಗಮ ಪುನರ್ವಸತಿ ಕೇಂದ್ರದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯ ಗೇಟ್‌ವರೆಗೆ ಸಿಸಿ ರಸ್ತೆ, ಪ್ರಾರ್ಥನಾ ಆವರಣದಲ್ಲಿ ಪ್ಲೇವರ್, 200 ಮೀಟರ್‌ ರನ್ನಿಂಗ್‌ ಟ್ರಾಫಿಕ್‌, ಖೋಖೋ, ವಾಲಿಬಾಲ್‌, ಕಬ್ಬಡ್ಡಿ ಗ್ರೌಂಡ್‌, ಹೆಣ್ಣು ಮಕ್ಕಳಿಗಾಗಿ ಹೈಟೆಕ್‌ ಶೌಚಾಲಯ, ನ್ಯೂಟ್ರಿಸಿಯನ್‌ ಗಾರ್ಡನ್‌, ಕಾಂಪೌಂಡ್‌ ಎತ್ತರ ಹೀಗೆ ವಿವಿಧ ಕಾರ್ಯ ಕೈಗೊಳ್ಳುವ ಮೂಲಕ ಮಾದರಿ ಸ್ಕೂಲ್‌ ಮಾಡುವ ಗುರಿ
ಇದೆ. ಮುಂದಿನ 50 ವರ್ಷ ನಮ್ಮ ಶಾಲೆ ಹೇಗಿರಬೇಕು, ವಿಶ್ವಪ್ರಸಿದ್ಧ ಕೂಡಲಸಂಗಮಕ್ಕೆ ಬರುವ ಭಕ್ತರು, ಪ್ರವಾಸಿಗರೂ ನಮ್ಮ ಶಾಲೆಗೆ ಭೇಟಿ ನೀಡಬೇಕೆಂಬುದು ನಮ್ಮ ಆಶಯವಿದೆ ಎಂದು ಮುಖ್ಯಾಧ್ಯಾಪಕ ರಮೇಶ ತಿಳಿಸಿದರು.

ಗ್ರಾಮೀಣ ಸರ್ಕಾರಿ ಪ್ರೌಢಶಾಲೆಗಳನ್ನು ಮಾದರಿ ಶಾಲೆಗಳಾಗಿ ಪರಿವರ್ತಿಸುವ ಉದ್ದೇಶದಿಂದ 9 ತಾಲೂಕಿನ 9 ಶಾಲೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರತಿಯೊಂದು ಶಾಲೆಯ ಸಮಗ್ರ ಅಭಿವೃದ್ಧಿಗೆ ತಲಾ 50 ಲಕ್ಷದಿಂದ 1 ಕೋಟಿವರೆಗೂ ಅನುದಾನ ಖರ್ಚು
ಮಾಡಲಾಗುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಲಾಗುತ್ತಿದೆ.
ಅಮರೇಶ ನಾಯಕ,
ಉಪ ಕಾರ್ಯದರ್ಶಿ, ಜಿಪಂ

ಮಾದರಿ ಸ್ಕೂಲ್‌ ನಿರ್ಮಾಣಕ್ಕೆ ನಮ್ಮ ಶಾಲೆ ಆಯ್ಕೆಯಾಗಿದ್ದು, ಸುಮಾರು 72 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಈ ಭಾಗದಲ್ಲಿ ನಮ್ಮ ಶಾಲೆ ಅತ್ಯುತ್ತಮವಾಗಿ ನಡೆಯುತ್ತಿದ್ದು, ಬೆಳಗಲ್‌, ಗಂಜಿಹಾಳ, ವಳಕಲ್ಲದಿನ್ನಿ, ಮ್ಯಾಗೇರಿ, ವಡಗೋಡದಿನ್ನಿ ಸೇರಿದಂತೆ ಸುಮಾರು 17 ಹಳ್ಳಿ ಮಕ್ಕಳು ಬರುತ್ತಾರೆ. ಶಾಲೆಯಲ್ಲಿ 470ಕ್ಕೂ ಹೆಚ್ಚು ಮಕ್ಕಳಿದ್ದು, ಹೆಣ್ಣು ಮಕ್ಕಳ ಸಂಖ್ಯೆಯೇ 310 ಜನ ಇದ್ದಾರೆ. ಕೂಡಲಸಂಗಮಕ್ಕೆ ಬರುವ
ಭಕ್ತರು-ಪ್ರವಾಸಿಗರೂ ನಮ್ಮ ಶಾಲೆಗೆ ಭೇಟಿ ನೀಡಿ ಖುಷಿ ಪಡಬೇಕು. ಆ ರೀತಿ ಮಾದರಿ ಶಾಲೆ ನಿರ್ಮಿಸಬೇಕು ಎಂಬುದು ನಮ್ಮ ಗುರಿ ಇದೆ.
ರಮೇಶ ಭಜಂತ್ರಿ, ಮುಖ್ಯಾಧ್ಯಾಪಕ, ಸರ್ಕಾರಿ
ಪ್ರೌಢಶಾಲೆ, ಕೂಡಲಸಂಗಮ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next