Advertisement

ಹೈಟೆಕ್‌ ಬಸ್‌ ನಿಲ್ದಾಣದದಲ್ಲಿ ಅನೈರ್ಮಲ್ಯ

06:12 PM Apr 22, 2022 | Team Udayavani |

ಗುರುಮಠಕಲ್‌: ಸರಕಾರ ಸ್ವಚ್ಛತೆಗಾಗಿ ಕೋಟ್ಯಂತರ ಹಣ ವ್ಯಯಿಸುತ್ತಿದೆ. ವ್ಯಾಪಾರಿಗಳು ಮತ್ತು ಉದ್ದಿಮೆದಾರರಿಂದ ಹೆಚ್ಚುವರಿಯಾಗಿ ಸ್ವಚ್ಛ ಭಾರತ್‌ ಸೆಸ್‌ ಕೂಡ ವಿಧಿಸಲಾಗುತ್ತಿದೆ. ಆದರೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆಯ ಅನುಷ್ಠಾನದಲ್ಲಿ ಬೇಜವಾಬ್ದಾರಿ ಧೋರಣೆ ಅನುಸರಿಸುತ್ತಿರುವುದು ಮಾತ್ರ ವಿಪರ್ಯಾಸ.

Advertisement

ಗುರುಮಠಕಲ್‌ ಪಟ್ಟಣದ ಹೈಟೆಕ್‌ ಬಸ್‌ ನಿಲ್ದಾಣದ ಇಂದಿನ ದುಸ್ಥಿತಿಯ ಚಿತ್ರಣ ಇದು. ಬಸ್‌ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಚರಂಡಿ ತ್ಯಾಜ್ಯ, ಕೊಳಕು, ದುರ್ವಾಸನೆ ನಿಮ್ಮನ್ನು ಸ್ವಾಗತಿಸುತ್ತವೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣಲ್ಲಿ ಕುಳಿತುಕೊಂಡರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಎಲ್ಲೆಂದರಲ್ಲಿ ಗುಟ್ಕಾ, ಪಾನ್‌ ಉಗುಳಿದ್ದು, ಕಾಂಪೌಡ್‌ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದು, ದುರ್ವಾಸನೆ ಬೀರಿದೆ.

ಬಸ್‌ ನಿಲ್ದಾಣದ ಸುತ್ತ ಪ್ಲಾಸ್ಟಿಕ್‌, ಹಳೆಯ ಬಟ್ಟೆ ತುಂಬಿವೆ. ಕೊಳಚೆ ನೀರು ಹರಿದು ಹೋಗುತ್ತಿಲ್ಲ. ಇದರಿಂದ ನಿಲ್ದಾಣ ಸಾಂಕ್ರಾಮಿಕ ರೋಗಗಳು ಹಾಗೂ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ. ಬಸ್‌ ನಿಲ್ದಾಣದಲ್ಲಿ ಅಳವಡಿಸಿರುವ ಕಸದ ಬುಟ್ಟಿಗಳು ಲೆಕ್ಕಕ್ಕಾಗಿ ಮಾತ್ರ ಇವೆ. ಕಸದ ತೊಟ್ಟಿಗಳ ಕೆಳಭಾಗ ಸಂಪೂರ್ಣ ತುಕ್ಕು ಹಿಡಿದು ಕಸವೆಲ್ಲಾ ಕೆಳಗೆ ಚೆಲ್ಲುತ್ತಿದೆ. ಇದರಿಂದ ಪ್ರಯಾಣಿಕರೂ ಎಲ್ಲೆಂದರಲ್ಲಿ ಕಸ ಎಸೆಯುವ ಅನಿವಾರ್ಯತೆ ನಿರ್ಮಾವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ನಿಲ್ದಾಣದ ಒಳಗೆ ಮುಳ್ಳಿನ ಪೊದೆ ಬೆಳೆದಿವೆ. ತಡೆಗೋಡೆಯ ಪಕ್ಕದ ಖಾಲಿ ಸ್ಥಳದಲ್ಲಿ ಗಿಡಗಳನ್ನು ನೆಡುವುದು, ಅಗತ್ಯ ಸ್ವಚ್ಛತಾ ಕಾರ್ಯ ಮಾಡುವುದು ಹಾಗೂ ಬಸ್‌ ನಿಲ್ದಾಣದ ಕಟ್ಟಡವನ್ನು ನಿರ್ಮಿಸುವಾಗ ಮೀಸಲಿಟ್ಟ ಸ್ಥಳದಲ್ಲಿ ಉದ್ಯಾನವನ ಬೆಳೆಸುವುದು ಸೇರಿದಂತೆ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಗೊಲ್ಲ ಸಮಾಜದ ತಾಲೂಕು ಅಧ್ಯಕ್ಷ ಯಲ್ಲಪ್ಪ ಯಾದವ ಆರೋಪಿಸುತ್ತಾರೆ.

ಬಸ್‌ ನಿಲ್ದಾಣವೆಲ್ಲ ಕೊಳಕು, ಗಲೀಜಿನ ಆಗರವಾಗಿದೆ. ಸಿಬ್ಬಂದಿಯೇ ನಿಲ್ದಾಣದ ಸ್ವಚ್ಛತೆ ಕಾಪಾಡದಿರುವುದು ವಿಪರ್ಯಾಸ. ಸಾರ್ವಜನಿಕ ಸ್ಥಳಗಳೆಂದರೆ ಬೇಕಾಬಿಟ್ಟಿ ಬಳಸಿಕೊಳ್ಳುವುದಲ್ಲ. ನಿಲ್ದಾಣದ ಸ್ವಚ್ಛತೆಗೆ ಸಿಬ್ಬಂದಿ ಶ್ರಮಿಸಲಿ, ಇದಕ್ಕೆ ಸಾರ್ವಜನಿಕರೂ ಸಹಕರಿಸಲಿ. ಸಿಬ್ಬಂದಿಗೆ, ಸಾರ್ವಜನಿಕರಿಗೆ ನಾಗರಿಕ ಪ್ರಜ್ಞೆ ಅಗತ್ಯ. ಈ ಕುರಿತು ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿದರೆ ಕರೆ ಮಧ್ಯದಲ್ಲೇ ಸಂಪರ್ಕ ಕಡಿತಗೊಂಡಿತ್ತು.

ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡುವ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಬೇಕಾದ ಸಿಬ್ಬಂದಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಸಿಬ್ಬಂದಿ ಎಚ್ಚೆತ್ತುಕೊಂಡು ಸ್ವಚ್ಛತೆಯತ್ತ ಗಮನ ಹರಿಸಲಿ. ಮಹಾಂತೇಶ ಶೆಕ್ಲಾಸಪಲ್ಲಿ, ಪ್ರಯಾಣಿಕ

Advertisement

-ಚೆನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next