ಸಿಂದಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಹೈಟೆಕ್ ಬಸ್ ನಿಲ್ದಾಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಎಲ್ಲಿ ನೋಡಿದಲ್ಲಿ ಕಸ. ನೋಡಲು ತಿಪ್ಪೆಗುಂಡಿಯಂತಿದೆ. ಸ್ವಲ್ಪ ಮಳೆ ಬಂದರೆ ಸಾಕು ಅಲ್ಲಲ್ಲಿ ನೀರು ನಿಂದು ಕೊಳಚೆ ಪ್ರದೇಶವಾಗುತ್ತದೆ. ದೂರದಿಂದ ಬಸ್ ನಿಲ್ದಾಣ ಸುಂದರವಾಗಿ ಕಾಣುತ್ತದೆಯಾದರೂ ಸೌಕರ್ಯಗಳಿಂದ ವಂಚಿತವಾಗಿದೆ.
2013ರ ಸೆ. 28ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪಟ್ಟಣದಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿ ಇಂದಿಗೆ ಬರೊಬ್ಬರಿ 6 ವರ್ಷಗಳಾಗುತ್ತಿವೆ. ಅಂದು ಉದ್ಘಾಟಿಸಿದನಿಲ್ದಾಣ ಇಂದು ಕಸದತೊಟ್ಟಿಯಾಗಿ ಮಾರ್ಪಟ್ಟಿದೆ. ಬಸ್ ನಿಲ್ದಾಣದ ಮುಂದೆ ಇರುವ ಗಾರ್ಡನ್‌ಲ್ಲಿ ಕಸ ತುಂಬಿದ್ದು ಮದ್ಯದ ಬಾಟಲ್‌ಗಳೆ ಕಾಣವಿಗುತ್ತವೆ. ಬಸ್ ನಿಲ್ದಾಣದಲ್ಲಿ ಮಹಿಳಾ ಕೊಠಡಿಯಲ್ಲಿ ವ್ಯವಸ್ಥೆಯಿಲ್ಲ. ಕುರ್ಚಿಗಳು ಹಾಳಾಗಿವೆ. ಅಲ್ಲಿ ಕಿಡಗೇಡಿಗಳು ತಂಬಾಕು, ಗುಟ್ಕಾ ತಿಂದುಉಗುಳಿದ್ದಾರೆ, ಆಸನಗಳು ಮುರಿದಿವೆ, ಕಸ ತುಂಬಿದೆ. ನಿಲ್ದಾಣದಲ್ಲಿದ್ದ ಗ್ರಂಥಾಲಯದಲ್ಲಿ ನಿರುಪಯುಕ್ತ ವಸ್ತುಗಳನ್ನು ಇಟ್ಟಿದ್ದು ಈಗ ಅದು ಸ್ಟೋರ್ ರೂಂ ಆಗಿ ಮಾರ್ಪಟ್ಟಿದೆ.
ಇಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗದೇ ತುಕ್ಕು ಹಿಡಿದಿದೆ. ಕುಡಿಯುವ ನೀರಿಗಾಗಿ ಮಾಡಿದ ವ್ಯವಸ್ಥೆಯಲ್ಲಿ ನೀರು ಸಣ್ಣದಾಗಿ ಬರುತ್ತದೆ. ಅಲ್ಲದೆ ನೀರಿನ ತೊಟ್ಟೆಯಲ್ಲಿ ಗಲೀಜು ನೀರು ನಿಂತಿದೆ.
ಈಡೇರದ ಆಸೆ: ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಮಾದರಿಯಲ್ಲಿ ಪಟ್ಟಣದಲ್ಲಿನ ಬಸ್ ನಿಲ್ದಾಣಕ್ಕೆ ಕೋಟ್ಯಂತರ ರೂ. ಮೌಲ್ಯದ ಭೂಮಿಯನ್ನು ದಾನವಾಗಿ ನೀಡಿದ ಲಿಂ| ಚನ್ನವೀರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಭಕ್ತರು ಒತ್ತಾಯಿಸಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.
-ರಮೇಶ ಪೂಜಾರ