ಕಲಬುರಗಿ: ಉತ್ಛ ನ್ಯಾಯಾಲಯ ನೀಡಿದ ಆದೇಶದಂತೆ ಇನ್ನು 10 ದಿನಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ಥಳದ ವ್ಯವಸ್ಥೆ ಹಾಗೂ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಬೀದಿ ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅಡ್ಡಿಪಡಿಸಿದ್ದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನ್ಯಾಯಾಲಯದ ಆದೇಶ ಜಾರಿ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ತಮಗೆ ಸಂಬಂಧವಿಲ್ಲ ಎಂದು ಹೇಳಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಗರದ ಚೌಪಾಟಿ ಸ್ಥಳದಲ್ಲಿ ಕಳೆದ 20 ವರ್ಷದಿಂದ ವ್ಯಾಪಾರ ಮಾಡುತ್ತಿದ್ದ ಸುಮಾರು 200 ಜನರನ್ನು ಜಿಲ್ಲಾಡಳಿತ ಕೆಲ ತಿಂಗಳ ಹಿಂದೆ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಿದೆ.
ಈ ಎಲ್ಲ ವ್ಯಾಪಾರಿಗಳು ಸಂತ್ರಸ್ಥರಾಗಿದ್ದಾರೆ. ಏಳು ವಲಯಗಳನ್ನು ನಿರ್ಮಿಸಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದರೂ ಆ ಕಾರ್ಯವೂ ಆಗಿಲ್ಲ. ಟಿವಿಸಿ ಸಮಿತಿ ರಚಿಸಿ ವರ್ಷವಾದರೂ ಒಂದೂ ಮಾಸಿಕ ಸಭೆ ಕರೆದಿಲ್ಲ. ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಹಲವು ಯೋಜನೆಗಳಿದ್ದರೂ ಪಾಲಿಕೆ ಬೀದಿ ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ವ್ಯಾಪಾರಸ್ಥರಿಗೆ ತಲಾ 25 ಸಾ.ರೂ. ಗಳಂತೆ ಸಹಾಯಧನ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಿತ್ತು. ಅದೂ ಜಾರಿಯಾಗಿಲ್ಲ ಎಂದರು. ಕಳೆದ ಡಿ.14 ರಂದು ಕಲಬುರಗಿ ಹೈಕೋರ್ಟ್ ಪೀಠ ತೀರ್ಪು ನೀಡಿ 150 ಜನರಿಗೆ ಚೌಪಾಟಿ ಜಾಗದಲ್ಲಿಯೇ ವ್ಯವಸ್ಥೆ ಮಾಡಿ, ನಾಲ್ಕು ವಾರದೊಳಗೆ ವ್ಯಾಪಾರಕ್ಕೆ ಅವಕಾಶ ಒದಗಿಸಲು ಸೂಚಿಸಿದೆ. ಆ ಅವಧಿ ಮುಗಿದರೂ ಸಹ ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಬೆಲೆ ನೀಡಿಲ್ಲ. ಇನ್ನು ಮೇಲಾದರೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಸಂಘದ ಸಂಸ್ಥಾಪಕ ಅಮೃತ ಸಿರನೂರ, ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ರವಿ ಒಂಟಿ, ಶಿವಕುಮಾರ ಭಾಗೋಡಿ, ಸರೂಬಾಯಿ, ಭಾಗಮ್ಮಾ ಚೌಧರಿ, ಆನಂದ ಸಾಕ್ರೆ, ಚಂದ್ರಶೇಖರ ರೆಡ್ಡಿ, ದತ್ತು ಭಾಸಗಿ, ಸುಭಾಷ ಢರಬಿ ಹಾಗೂ ಇತರರಿದ್ದರು.