Advertisement

ಪ್ರೌಢಶಾಲಾ ವಿದ್ಯಾರ್ಥಿನಿಯರ ಕರಾಟೆ ತರಬೇತಿ ಸ್ಥಗಿತ

10:31 PM Nov 11, 2019 | Sriram |

ಉಡುಪಿ: ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಸ್ವಯಂ ರಕ್ಷಣಾ ಸಾಮರ್ಥ್ಯ ಬೆಳೆಸುವ ಉದ್ದೇಶದಿಂದ ಪ್ರಾರಂಭಿಸಿದ್ದ “ಕರಾಟೆ’ ತರಬೇತಿ ಕಳೆದ ಎರಡು ವರ್ಷದಿಂದ ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ಥಗಿತಗೊಂಡಿದೆ.

Advertisement

ಹೆಣ್ಣು ಮಕ್ಕಳು ಪ್ರತಿಕೂಲ ಸನ್ನಿವೇಶದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರನ್ನಾಗಿ ಮಾಡುವ ಉದ್ದೇಶದಿಂದ 2014ರಲ್ಲಿ ರಾಜ್ಯದ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಕರಾಟೆ ತರಬೇತಿ ಪ್ರಾರಂಭಿಸಿದ್ದು, ಅದಕ್ಕಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಅನುದಾನ ಮೀಸಲಿಡಲಾಗಿತ್ತು.

ಅನುದಾನದ ಕೊರತೆಯಿಂದ ಸ್ಥಗಿತ
ಉಡುಪಿಯಲ್ಲಿ 106 ಹಾಗೂ ದ.ಕ.ದಲ್ಲಿ 169 ಸರಕಾರಿ ಪ್ರೌಢಶಾಲೆಗಳಿವೆ. 2014ರಿಂದ 2017 ವರೆಗೆ ಅವಿಭಜಿತ ದ.ಕ. ಜಿಲ್ಲೆಯ 10,000 ಮಿಕ್ಕಿದ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆದುಕೊಂಡಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಸರಕಾರ ಆರ್ಥಿಕ ಹೊರೆ ಹಾಗೂ ರೈತರ ಸಾಲ ಮನ್ನಾ ಕಾರಣ ನೀಡಿ ತರಬೇತಿಯನ್ನು ಸ್ಥಗಿತಗೊಳಿಸಿದ್ದು, ಇದರಿಂದಾಗಿ 10,000 ಮಿಕ್ಕಿದ ವಿದ್ಯಾರ್ಥಿನಿಯರು ಕರಾಟೆ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗ್ರಾಮಾಂತರದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ತೆರಳುತ್ತಾರೆ. ಬಸ್‌ ನಿಲ್ದಾಣದಿಂದ ಮನೆ ಹೋಗಬೇಕಾದರೆ 2 ಕಿ.ಮೀ. ದೂರ ಕ್ರಮಿಸಬೇಕಾಗಿದೆ. ವಿದ್ಯಾರ್ಥಿನಿಯರು ನಿರ್ಜನ ಪ್ರದೇಶದಲ್ಲಿ ಧೈರ್ಯದಿಂದ ತೆರಳಲು ಕರಾಟೆ ಸಹಕಾರಿ. ಕರಾವಳಿ ಜಿಲ್ಲೆಯ ಕುಗ್ರಾಮದಲ್ಲಿ ಘಟಿಸಿದ ಅತ್ಯಾಚಾರ ಪ್ರಕರಣದ ಎಲ್ಲರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ತರಬೇತಿಯನ್ನು ಪ್ರಾರಂಭಿಸಬೇಕು ಎನ್ನುವುದು ಪೊಷಕರ ಒತ್ತಾಯ.

3 ತಿಂಗಳ 24 ಅವಧಿ ತರಬೇತಿ
ಸರಕಾರಿ ಶಾಲೆಯ 9ನೆ ತರಗತಿ ವಿದ್ಯಾರ್ಥಿನಿಯರಿಗೆ ವಾರಕ್ಕೆ 2 ಅವಧಿಯಂತೆ ( 45 ನಿಮಿಷಗಳ ತರಗತಿ) ತಿಂಗಳಿಗೆ 8 ಗಂಟೆ ತ‌ರಬೇತಿ ನಿಗದಿ ಪಡಿಸಲಾಗಿತ್ತು. ಶಾಲೆಯ ಮುಖ್ಯಶಿಕ್ಷಕರ ನೇತೃತ್ವದಲ್ಲಿ ಗುರುತಿಸಿದ ತರಬೇತಿದಾರರಿಂದ ವಿದ್ಯಾರ್ಥಿನಿಯರಿಗೆ ಕರಾಟೆಯ ವಿವಿಧ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ನೀಡಲಾಗುತ್ತಿತ್ತು. ತರಬೇತುದಾರರಿಗೆ ಗೌರವ ಧನ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಸೇರಿದಂತೆ 3 ತಿಂಗಳ ಅವಧಿಗೆ ಪ್ರತಿ ಶಾಲೆಗೆ 9,000 ರೂ. ಸರಕಾರ ಪಾವತಿ ಮಾಡುತ್ತಿತ್ತು.

Advertisement

ಕರಾಟೆ ಅಗತ್ಯವಿದೆ
ವಿದ್ಯಾರ್ಥಿನಿಯರಿಗೆ ಕರಾಟೆ ಶಿಕ್ಷಣದ ಅಗತ್ಯವಿದೆ. ಇದರಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸಾಧ್ಯ.ಪೋಷಕರಿಗೆ ಹಣಕೊಟ್ಟು ತರಬೇತಿ ನೀಡುವ ಶಕ್ತಿಯಿಲ್ಲ. ಆದರಿಂದ ಸರಕಾರ ಶೀಘ್ರದಲ್ಲಿ ಈ ತರಬೇತಿಯನ್ನು ಮತ್ತೆ ಪ್ರಾರಂಭಿಸಬೇಕು.
-ಮೈತ್ರಿ,9ನೇ ತರಗತಿ ವಿದ್ಯಾರ್ಥಿ

ಅನುದಾನವಿಲ್ಲ
ಹೆಣ್ಣುಮಕ್ಕಳಿಗೆ ಸ್ವರಕ್ಷಣೆ ತರಬೇತಿ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಕರಾಟೆ ತರಬೇತಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕಳೆದ ಎರಡು ವರ್ಷದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತರಬೇತಿ ನಿಲ್ಲಿಸಲಾಗಿದೆ.
-ಶೇಷಶಯನ ಕಾರಿಂಜ,
ಡಿಡಿಪಿಐ, ಉಡುಪಿ ಜಿಲ್ಲೆ

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next