Advertisement

ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಸವದಿ

04:52 PM Jan 29, 2021 | Team Udayavani |

ದೇವದುರ್ಗ: ಕಲ್ಯಾಣ ಕರ್ನಾಟಕ ಭಾಗ ಸೇರಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಗೂಗಲ್‌ ಗ್ರಾಮದಲ್ಲಿ ಆಯೋಜಿಸಿದ್ದ 231 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಅಡಿಗಲ್ಲು ಸಮಾರಂಭ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅತ್ಯಂದ ಹಿಂದುಳಿದ ತಾಲೂಕು ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ದೇವದುರ್ಗ ತಾಲೂಕಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಕಾಳಜಿ ಹಾಗೂ ಸ್ಥಳೀಯ ಶಾಸಕ ಕೆ. ಶಿವನಗೌಡ ನಾಯಕ ಇಚ್ಛಾಶಕ್ತಿಯಿಂದ ನಾಗಾಲೋಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ 250 ಕೋಟಿ ಸೇರಿ ಸದ್ಯ ಐದನೇ ಹಂತದಲ್ಲಿ 231 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ದೇವದುರ್ಗ ಮಾದರಿ  ಕ್ಷೇತ್ರವಾಗಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಾನು ಡಿಸಿಎಂ ಆಗಿ ಎಲ್ಲ ಸಹಕಾರ ನೀಡುತ್ತೇನೆ ಎಂದರು. ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ದೇವದುರ್ಗ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದಿದ್ದು, ಶಾಸಕ ಕೆ. ಶಿವನಗೌಡ ನಾಯಕ ಇಚ್ಛಾಶಕ್ತಿಯಿಂದ ಸದ್ಯ ಅಭಿವೃದ್ಧಿಯತ್ತ ಸಾಗುತ್ತಿದೆ.

ಕೇಂದ್ರ ಸರ್ಕಾರ ಈ ಹಿಂದೆ 14ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾಪಂಗೆ 40 ಲಕ್ಷ ರೂ. ಅನುದಾನ ನೀಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ  ಇದನ್ನು ಹೆಚ್ಚಿಸಿದ್ದು, ಪ್ರತಿ ಗ್ರಾಪಂಗೆ 1 ಕೋಟಿ ಅನುದಾನ ನೀಡಲಿದ್ದಾರೆ. ಈ ಅನುದಾನದಲ್ಲಿ ಕ್ಷೇತ್ರದ ಸಮಗ್ರ  ಅಭಿವೃದ್ಧಿ ಮಾಡಲಾಗುವುದು. ನಾನು ಕ್ಷೇತ್ರದಲ್ಲಿ ಕಳೆದ
10 ವರ್ಷಕ್ಕಿಂತಲೂ ಹೆಚ್ಚು ಕಾಲ ಸಂಬಂಧ ಹೊಂದಿದ್ದು, ಇಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಶಾಸಕ ಜನಪರ ಕಾರ್ಯ ನನಗೆ ಶಕ್ತಿ ತುಂಬಿವೆ ಎಂದರು.

ಶಾಸಕ ಕೆ. ಶಿವನಗೌಡ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವದುರ್ಗ ಕ್ಷೇತ್ರ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ 11,000 ಕೋಟಿ ರೂ. ಅನುದಾನ
ನೀಡಿದ್ದಾರೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗೂಗಲ್‌ ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ಜನರ ಜತೆ ರಾಯಚೂರಿಗೆ ಪಾದಯಾತ್ರೆ ಮಾಡಿದ್ದೆವು.
ಸುಮಾರು 25 ಸಾವಿರ ಜನರೊಂದಿಗೆ 86 ಕಿ.ಮೀ ಪಾದಯಾತ್ರೆ ಮಾಡಿದ್ದೆವು. ಅದರ ಫಲವಾಗಿ ಸರ್ಕಾರ ಈ ಭಾಗದ ರಸ್ತೆ ಅಭಿವೃದ್ಧಿಗೆ 112 ಕೋಟಿ ರೂ.
ಅನುದಾನ ನೀಡಿದೆ. ಹಿಂದಿನ ಸರ್ಕಾರ ಕ್ಷೇತ್ರಕ್ಕೆ 70 ಸಾವಿರ ಮನೆ ನೀಡಿ ಬಡನತ ನಿರ್ಮೂಲನೆಗೆ ಶ್ರಮಿಸಿದೆ ಎಂದರು.

Advertisement

ಈ ಸಂದರ್ಭದಲ್ಲಿ ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜರು, ಗಬ್ಬೂರು ಸಂಸ್ಥಾನ ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನವಲಕಲ್‌ನ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಗುಂಡಗುರ್ತಿಯ ಶ್ರೀ ನಿಜಲಿಂಗ ತಾತನವರು, ಮುಂಡರಗಿಯ ಶ್ರೀ ಶಿವಣ್ಣ ತಾತ, ಜಾಗಟಗಲ್‌ನ ಶ್ರೀ ಸಾಂಬಯ್ಯಪ್ಪ ತಾತನವರು, ಎನ್‌. ಗಣೇಕಲ್‌ನ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೆಂಕೋಬ ತಾತನವರು, ಶ್ರೀ ಅಯ್ಯಪ್ಪ ತಾತ, ಗುರುಬಸವ ರಾಜ ಗುರುಗಳು, ಜಂಬಣ್ಣ ತಾತ, ಕೆಂಚಣ್ಣ ತಾತ, ಜಿಪಂ ಅಧ್ಯಕ್ಷ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ, ಎಸ್ಪಿ ಪ್ರಕಾಶ ನಿಕ್ಕಮ್‌ ಇತರರಿದ್ದರು.

ಬೆಳ್ಳಿ ಗದೆ, ಖಡ್ಗ, ಕಿರೀಟ ಉಡುಗೊರೆ
ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬೆಳ್ಳಿ ಖಡ್ಗ, ವಸತಿ ಸಚಿವ ವಿ. ಸೋಮಣ್ಣಗೆ ಬೆಳ್ಳಿ ಕಿರೀಟ, ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ಬೆಳ್ಳಿ ಗಧೆ ನೀಡಿ ಶಾಸಕ ಕೆ. ಶಿವನಗೌಡ ನಾಯಕ ಸನ್ಮಾನಿಸಿದರು.

ನಮ್ಮ ಸರ್ಕಾರ ಅಧಿ ಕಾರಕ್ಕಾಗಿ ಆಡಳಿತ ನಡೆಸದೇ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಶಾಸಕ ಕೆ. ಶಿವನಗೌಡ ನಾಯಕ ಕೂಡ ತಮ್ಮ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕ್ಷೇತ್ರದ ಜನತೆ ನಾಲ್ಕನೇ ಬಾರಿ ಆಯ್ಕೆ ಮಾಡಿರುವುದೇ ಸಾಕ್ಷಿ.
ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next