ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಪ್ರಸ್ತುತ ಖಾಲಿಯಿರುವ 3 ನ್ಯಾಯಾಂಗ ಸದಸ್ಯರು ಹಾಗೂ 4 ಆಡಳಿತಾತ್ಮಕ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸೋಮವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವಕೀಲರಾದ ಕೆ. ಸತೀಶ್, ಎಂ. ಲೋಕೇಶ್ ಹಾಗೂ ಎಂ.ಕೆ. ಪೃಥ್ವೀಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿಗೆ ಸಂಬಂಧಿಸಿದಂತೆ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆಡಳಿತ ಹಾಗೂ ಸಿಬ್ಬಂದಿ ಸುಧಾರಣಾ ಇಲಾಖೆ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿತು. ಅಲ್ಲದೆ, ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ತನ್ನ ಹೇಳಿಕೆ ನೀಡಬೇಕು. ಅದೇ ರೀತಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ್ದೂ ಪಾತ್ರ ಇದೆ ಎಂದು ಹೇಳಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಎಸ್. ಭಾಗ್ವತ್, ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಬೆಂಗಳೂರು ಪ್ರಧಾನ ಪೀಠ ಸೇರಿ ಬೆಳಗಾವಿ ಮತ್ತು ಕಲಬುರಗಿ ಪೀಠಗಳನ್ನೊಳಗೊಂಡಿದೆ. ಇದರಲ್ಲಿ 1 ಅಧ್ಯಕ್ಷ ಹುದ್ದೆ, ನಾಲ್ಕು ನ್ಯಾಯಾಂಗ ಸದಸ್ಯರು ಹಾಗೂ 5 ಆಡಳಿತಾತ್ಮಕ ಸದಸ್ಯ ಹುದ್ದೆಗಳು ಮಂಜೂರಾತಿ ಹೊಂದಿವೆ. ಆದರೆ, ಸದ್ಯ ಒಬ್ಬರು ಅಧ್ಯಕ್ಷರು, ಓರ್ವ ನ್ಯಾಯಾಂಗ ಸದಸ್ಯ ಮತ್ತು ಒಬ್ಬರು ಆಡಳಿತ ಸದಸ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದ ರಂತೆ, ಪ್ರಸ್ತುತ 3 ನ್ಯಾಯಾಂಗ ಸದಸ್ಯರು ಹಾಗೂ 4 ಆಡಳಿತಾತ್ಮಕ ಸದಸ್ಯರ ಹುದ್ದೆಗಳು ಖಾಲಿ ಇವೆ.
ಹಾಲಿ ನ್ಯಾಯಾಂಗ ಸದಸ್ಯ ಎ.ವಿ. ಚಂದ್ರಶೇಖರ್ ಈ ವರ್ಷದ ಮೇನಲ್ಲಿ ಮತ್ತು ಆಡಳಿತ ಸದಸ್ಯ ವಿ.ಪಿ. ಬಳಿಗಾರ ಅವರು ನವೆಂಬರ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಆಗ 4 ನ್ಯಾಯಾಂಗ ಸದಸ್ಯರ ಹುದ್ದೆ ಮತ್ತು 5 ಆಡಳಿತ ಸದಸ್ಯರ ಹುದ್ದೆಗಳು ಖಾಲಿಯಾಗುತ್ತವೆ. ಈಗಾಗಲೇ ಕಾರ್ಯದೊತ್ತಡ ಅಧಿಕವಾಗಿದ್ದು, ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಕಾಲದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಆಗದಿದ್ದರೆ, ಸರ್ಕಾರಿ ನೌಕರರಿಗೆ ನ್ಯಾಯ ಸಿಗುವುದಿಲ್ಲ. 2018ರ ಡಿ.31ರಂತೆ ಕೆಎಟಿಯಲ್ಲಿ 14,838 ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.