ಮುಂಡರಗಿ: ಪಟ್ಟಣದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ದೃಢಪಟ್ಟಿದೆ ಎಂಬ ವದಂತಿ ಬುಧವಾರ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಈ ನಡುವೆ ಪಟ್ಟಣದ ಜಾಗೃತ ವೃತ್ತದ ಲಕ್ಷ್ಮೀಗುಡಿ ಓಣಿ ಸೇರಿದಂತೆ ಮತ್ತಿತರ ಪ್ರದೇಶಗಳನ್ನು ಏಕಾಏಕಿ ನಿರ್ಬಂಧಗೊಳಿಸಿದ್ದು ಪಟ್ಟಣದ ನಿವಾಸಿಗಳ ಆತಂಕಕ್ಕೆ ಕಾರಣವಾಯಿತು. ಬಳಿಕ ಆರೋಗ್ಯ ಇಲಾಖೆ ಪ್ರಕಟಿಸಿದ ವರದಿಯಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂಬುದನ್ನು ಅರಿತು ನಿರಾಳರಾದರು.
ಬುಧವಾರ ತಹಶೀಲ್ದಾರ್ ವೆಂಕಟೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ನಾಯಕ ಹಾಗೂ ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಇದರ ಬೆನ್ನಲ್ಲೇ ತಾಲೂಕು ಆಡಳಿತ, ಪುರಸಭೆ ವತಿಯಿಂದ ಜಾಗೃತ ವೃತ್ತ ಲಕ್ಷ್ಮೀಗುಡಿ ಓಣಿ ಪ್ರದೇಶವನ್ನು ಬ್ಯಾರಿಕೇಡ್ ಹಾಕಿ ಕಂಬಳಿ ವೃತ್ತ, ತೋಂಟದಾರ್ಯ ಮಠದ ರಸ್ತೆ, ಡಾ| ಬಿ.ಆರ್. ಅಂಬೇಡ್ಕರ ನಗರ, ಭೀಮರಾವ್ ವೃತ್ತ, ಮಂಜುನಾಥ ನಗರದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಯಿತು.
ಅದರೊಂದಿಗೆ ಪುರಸಭೆ ಸಿಬ್ಬಂದಿ ಈ ಭಾಗದ ಗಲ್ಲಿಗಲ್ಲಿಗಳನ್ನು ಸ್ವತ್ಛಗೊಳಿಸಿ, ಹೈಡ್ರೊಕ್ಲೊರೈಡ್, ಮೆಲಾಥೀಯಾನ್ ಪೌಡರ್, ಮೆಲಾಥೀಯಾನ್ ದ್ರಾವಣ ಸಿಂಪಡಿಸಿದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ, ಈ ಭಾಗದ ಜನರಿಗೆ ಕೋವಿಡ್ 19 ಹರಡುವಿಕೆ, ರೋಗ ಲಕ್ಷಣಗಳು ಹಾಗೂ ತಡೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಈ ಭಾಗದ ವ್ಯಕ್ತಿಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ ಎಂಬ ವದಂತಿ ಹರಿದಾಡಿತು. ಆದರೆ ರಾಜ್ಯ ಸರಕಾರ ಎಂದಿನಂತೆ ಬುಧವಾರ ಪ್ರಕಟಿಸಿದ ವರದಿಗಳಲ್ಲಿ ಜಿಲ್ಲೆಯ ಕೋವಿಡ್ 19 ಪ್ರಕರಣಗಳು ದೃಢಪಟ್ಟ ಮಾಹಿತಿ ಇಲ್ಲದಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಮುಂಡರಗಿ ಮತ್ತು ನರಗುಂದ ತಾಲೂಕಿನಲ್ಲಿ ಬುಧವಾರ ಯಾವುದೇ ಕೋವಿಡ್ 19 ಪ್ರಕರಣಗಳು ಖಚಿತವಾಗಿಲ್ಲ. ಆದರೆ ಆ ಭಾಗದ ಕೆಲವರಲ್ಲಿ ಕೋವಿಡ್ 19 ಲಕ್ಷಣಗಳು ಕಂಡುಬಂದಿದ್ದರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಕೋವಿಡ್ -19 ನಿಯಮಾವಳಿಯಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
– ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ