ಶಿವಮೊಗ್ಗ: ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪನವರ ಸಭೆಯಲ್ಲಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಇಬ್ಬರು ಶಾಸಕರಿಂದ ಗಲಾಟೆ ನಡೆದ ಘಟನೆ ಇಂದು ಜರುಗಿದೆ.
ಪ್ರೋಟೋಕಾಲ್ ವಿಚಾರದಲ್ಲಿ ಎಂಎಲ್ ಸಿ ಆಯನೂರು ಮಂಜುನಾಥ್ ಗಲಾಟೆ ಮಾಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಆಯನೂರು ಮಂಜುನಾಥ್ ಸಭೆಯಿಂದ ಹೊರನಡೆದರು. ಇವರಿಗೆ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹಾಗೂ ಆರ್.ಪ್ರಸನ್ನಕುಮಾರ್ ಸಾಥ್ ನೀಡಿ ಸಭೆಯಿಂದ ಹೊರ ನಡೆದರು.
“ನಾವೇನು ಶಾಸಕರಲ್ಲವೇನು? ಯಾರು ನೀವು? ತಮಾರೆ ಮಾಡ್ತೀರಾ? ನಿಮ್ಮ ಕಚೇರಿಗೆ ಬಂದು ಜನರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ಗೊತ್ತಾಗುತ್ತದೆ. ನಾವು ಶಾಸಕರಲ್ಲವೋ ಹೌದಾ ಅಂತ ಸಭೆಗೆ ಹೇಳಿ, ನಾವು ಮೂರು ಜನರು ಶಾಸಕರಲ್ಲವೋ ಹೇಳಿ ಜಿಲ್ಲಾಧಿಕಾರಿಯವರೆ? ಪ್ರೋಟೋಕಾಲ್ ಪಾಲನೆ ಮಾಡಬೇಕಾಗಿದ್ದು ತಹಶಿಲ್ದಾರ್ ತಾನೇ? ಯಾಕೆ ನೀವು ಪ್ರೋಟೋ ಕಾಲ್ ಫಾಲೋ ಮಾಡಲ್ಲ” ಎಂದು ಗರಂ ಆದರು.
ಇದನ್ನೂ ಓದಿ:ಹೊಡೆದ್ರೆ ವಾಪಸ್ ಅದರಲ್ಲಿ ಹೊಡಿರಿ ಎಂದಿದ್ದು ತಪ್ಪಾ?: ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
“ಜಿಲ್ಲಾಧಿಕಾರಿಗಳ ಸಭೆ ಅಥವಾ ತಾಲೂಕಿನ ಆಡಳಿತದಲ್ಲಿ ನಡೆಯುವಲ್ಲಿ ಸಭೆಗೆ ಆಹ್ವಾನ ಸಿಗುವುದಿಲ್ಲ. ಅದರ ಬಗ್ಗೆ ಮಾಹಿತಿ ಕೊಡುವುದಿಲ್ಲ. ಯಾರಿಗಾದರೂ ಅನುದಾನ ಕೊಟ್ಟರೆ ಮಾಹಿತಿ ನೀಡುವುದಿಲ್ಲ. ಪರಿಹಾರ ಧನ ನೀಡಿದರೆ ನಮಗೆ ಮಾಹಿತಿ ಸಿಗೋದಿಲ್ಲ. ನಾವೇನು ನಿಮಗೆ ಶಾಸಕರ ರೀತಿ ಕಾಣಿಸೋದಿಲ್ವಾ ಎಂದು ಆಯನೂರು ಮಂಜುನಾಥ್ ಹಾಗೂ ಇತರ ಶಾಸಕರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.