Advertisement

ಸಮಸ್ಯೆ ತಡೆಗೆ ಹೈ ಡೆನ್ಸಿಟಿ ಕಾರಿಡಾರ್‌ ಸ್ಟಡಿ

10:34 AM Oct 26, 2019 | Suhan S |

ಬೆಂಗಳೂರು: ನಿತ್ಯ ಒಂದಿಲ್ಲೊಂದು ಕಾರಣಗಳಿಗೆ ಬೆಂಗಳೂರು ವಿಸ್ತಾರಗೊಳ್ಳುತ್ತಿದೆ. ಅಷ್ಟೇ ವೇಗದಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕೂಡ ಏರಿಕೆಯಾಗುತ್ತಿದೆ.

Advertisement

ಅದರ ಬೆನ್ನಲ್ಲೇ ಈಗಾಗಲೇ ಗುರುತಿಸಿರುವ 12 “ಹೈ ಡೆನ್ಸಿಟಿ ಕಾರಿಡಾರ್‌'(ಅತೀ ಹೆಚ್ಚು ವಾಹನಗಳು ಓಡಾಡುವ ಮಾರ್ಗ ಅಥವಾ ಸುಗಮ ಸಂಚಾರಕ್ಕೆ ತೊಡಕಾಗುವ ಮಾರ್ಗ) ಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಸರ್ಕಾರದ ಸೂಚನೆ ಮೇರೆಗೆ ಸಂಚಾರ ವಿಭಾಗದ ಪೊಲೀಸರು ಕಾರ್ಯ ಯೋಜನೆ ಸಿದ್ದಪಡಿಸುತ್ತಿದ್ದಾರೆ. ಸಂಚಾರ ತಜ್ಞರು, ಎಂಜಿನಿಯರ್‌ ವಿದ್ಯಾರ್ಥಿಗಳು ಹಾಗೂ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಈ ಕಾರಿಡಾರ್‌ಗಳಲ್ಲಿ ಅಧ್ಯಯನ ನಡೆಸುತ್ತಿದೆ.

ಓಡಾಡುವ ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ, ಪಾದಚಾರಿಗಳ ಸಂಚಾರ, ಆರ್ಥಿಕ ವಹಿವಾಟು ಸೇರಿ ಇತರೆ ಪ್ರಮುಖ ಅಂಶಗಳನ್ನು ಆಧರಿಸಿ ಬಳ್ಳಾರಿ ರಸ್ತೆ(ಚಾಲುಕ್ಯ ವೃತ್ತದಿಂದ ಹೆಬ್ಟಾಳ), ಹಳೇ ಮದ್ರಾಸ್‌ ರಸ್ತೆ (ಟ್ರಿನಿಟಿ ವೃತ್ತದಿಂದ ಕೆ.ಆರ್‌.ಪುರಂ), ಹಳೇ ಏರ್‌ಪೋರ್ಟ್‌ ರಸ್ತೆ(ಎಎಸ್‌ಸಿ ಸೆಂಟರ್‌ನಿಂದಕಾಡುಗೋಡಿ), ಸರ್ಜಾಪುರ ರಸ್ತೆ (ಹೊಸೂರು ರಸ್ತೆಯ ಸೆಂಟ್‌ ಜಾನ್ಸ್‌ ಆಸ್ಪತ್ರೆಯಿಂದ ಕಾರ್ಮೆಲಾರಾಂ ಸೇತುವೆ), ಹೊಸೂರು ರಸ್ತೆ (ವೆಲ್ಲಾರ ಜಂಕ್ಷನ್‌ನಿಂದಸಿಲ್ಕ್ ಬೋರ್ಡ್‌) ಬನ್ನೇರುಘಟ್ಟ ರಸ್ತೆ(ಡೈರಿ ವೃತ್ತದಿಂದ ನೈಸ್‌ ರಸ್ತೆ), ಕನಕಪುರ ರಸ್ತೆ(ಕೆ. ಆರ್‌.ರಸ್ತೆಯಿಂದ ನೈಸ್‌ ರಸ್ತೆ), ಮೈಸೂರು ರಸ್ತೆ (ಹಡ್ಸನ್‌ ವೃತ್ತದಿಂದ ನೈಸ್‌ರಸ್ತೆ), ಮಾಗಡಿ ರಸ್ತೆ (ಹಳೇ ಬಿನ್ನಿ ಮಿಲ್‌ನಿಂದ ನೈಸ್‌ ರಸ್ತೆ), ತುಮಕೂರು ರಸ್ತೆ (ಓಕಳಿಪುರಂನಿಂದ ಗೊರಗುಂಟೆ ಪಾಳ್ಯ), ವೆಸ್ಟ್‌ ಆಫ್ ಕಾರ್ಡ್‌ರಸ್ತೆ (ಸೋಪ್‌ ಫ್ಯಾಕ್ಟರಿಯಿಂದ ಮೈಸೂರುರಸ್ತೆ) (ಹೆಬ್ಟಾಳದಿಂದ ಗೊರಗುಂಟೆ ಪಾಳ್ಯ) ಯನ್ನು ಹೈ ಡೆನ್ಸಿಟಿ ಕಾರಿಡಾರ್‌ ಎಂದು ಗುರುತಿಸಲಾಗಿದೆ.

ಈ ಮಾರ್ಗಗಳು ನಗರದಿಂದ ಹೊರವಲಯಕ್ಕೆ ಹೋಗುವ ಪ್ರಮುಖ ಮಾರ್ಗಗಳಾಗಿದ್ದು, ಈ ರಸ್ತೆಯಲ್ಲಿ ಪ್ರತಿ ಗಂಟೆಗೆ ಸರಾಸರಿ 15-20 ಸಾವಿರ ವಾಹನಗಳು ಓಡಾಡುತ್ತಿದ್ದು, ದಿನಕ್ಕೆ ಮೂರೂವರೆ ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತವೆ. ಹೀಗಾಗಿ ಈ ಮಾರ್ಗಗಳ ಅಭಿವೃದ್ಧಿ ಕುರಿತು ವರದಿ ಸಿದ್ದಪಡಿಸಲಾಗುತ್ತಿದೆ.

ಅಧ್ಯಯನ ಹೇಗೆ?: ನಗರದ 44 ಸಂಚಾರ ಠಾಣಾಧಿಕಾರಿಗಳು ಅಧ್ಯಯನ ತಂಡದ ಜತೆ ಮೊದಲ ಹಂತದಲ್ಲಿ ಪ್ರತಿ ಕಾರಿಡಾರ್‌ನ 200 ಮೀ., ಎರಡನೇ ಹಂತದಲ್ಲಿ ಒಂದು ಕಿ.ಮೀ. ರಸ್ತೆಯನ್ನು ಆಯ್ಕೆ ಮಾಡಿಕೊಂಡು ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ, ಅವುಗಳ ವೇಗ, ಪಾದಚಾರಿ ಮಾರ್ಗ, ಬೀದಿ ದೀಪಗಳು, ಗುಂಡಿಗಳು, ನೀರು ನಿಲ್ಲುವ ಸ್ಥಳ, ಮಾಲಿನ್ಯ ಉಂಟಾಗುವ ಸ್ಥಳ ಸೇರಿ ಸುಗಮ ಸಂಚಾರಕ್ಕೆ ತೊಡಕಾಗುವ ಸಮಸ್ಯೆ ಪತ್ತೆ ಹಚ್ಚುತ್ತಿದ್ದಾರೆ. ಜತೆಗೆ, ಅಪಘಾತಗಳ ಸಂಖ್ಯೆ, ಪಾದಚಾರಿ

Advertisement

ಮಾರ್ಗ ಇದ್ದರೂ ಸಾರ್ವಜನಿಕರು ಯಾಕೆ ರಸ್ತೆಯನ್ನು ಬಳಸುತ್ತಾರೆ ಎಂಬೆಲ್ಲ ಅಂಶಗಳ ಕುರಿತುಅಧ್ಯಯನ ನಡೆಸುತ್ತಿದ್ದಾರೆ. ಒಂದೂವರೆ ತಿಂಗಳಿಂದ ನಿರಂತರವಾಗಿ ಅಧ್ಯಯನ ನಡೆಯುತ್ತಿದ್ದು, ಮೊದಲ ಹಂತದ ವರದಿ ಹಿರಿಯ ಅಧಿಕಾರಿಗಳಿಗೆ ತಲುಪಿದೆ. ಇನ್ನು 2 ತಿಂಗಳಲ್ಲಿ ಪೂರ್ಣ ವರದಿ ಬರಲಿದೆ.

ಮೂರು ಹಂತದಲ್ಲಿ ಅಭಿವೃದ್ಧಿ: ಅಧ್ಯಯನ ವರದಿ ಆಧರಿಸಿ ಪ್ರತಿ ಕಾರಿಡಾರ್‌ನಲ್ಲಿ ಪ್ರಮುಖವಾಗಿ ಯಾವ ಸ್ಥಳದಲ್ಲಿ ವಾಹನ ನಿಲುಗಡೆ ನಿಷೇಧ, ವಾಹನ ನಿಲುಗಡೆ ವ್ಯವಸ್ಥೆ, ಸೂಚನಾ ಫ‌ಲಕಗಳು, ಸ್ಕೈವಾಕ್‌, ರಸ್ತೆ ವಿಭಜಕ, ಎಷ್ಟು ಕಿ.ಮೀಟರ್‌ಗಳಿಗೆ ಸಿಗ್ನಲ್‌ ದೀಪ ಅಳವಡಿಕೆ, ಪಾದಚಾರಿ ಮಾರ್ಗಗಳ ನಿರ್ಮಾಣ ಹಾಗೂ ಎಲ್ಲಿ ಬಸ್‌ ನಿಲ್ದಾಣ, ಆಟೋ ನಿಲ್ದಾಣ ಮಾಡಬೇಕು. ರಸ್ತೆ ಉಬ್ಬು ನಿರ್ಮಿಸಬೇಕು, ಯೂಟರ್ನ್ ವ್ಯವಸ್ಥೆ, ಜಂಕ್ಷನ್‌ಗಳ ವಿಸ್ತೀರ್ಣ ಸೇರಿದಂತೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 3 ಹಂತದಲ್ಲಿ ಕ್ರಮ ಜರುಗಿಸಲು ಚಿಂತಿಸಲಾಗಿದೆ.

 

ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಕೆ :  ಸಂಚಾರ ದಟ್ಟಣೆಯ ಸಮಪರ್ಕ ನಿರ್ವಹಣೆಗೆ ಸಂಚಾರ ಪೊಲೀಸರು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಮೊರೆ ಹೋಗಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ನಗರದ 400 ಟ್ರಾಫಿಕ್‌ ಸಿಗ್ನಲ್‌ ಗಳಲ್ಲಿ ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನ ಅಳವಡಿಕೆಯಾಗಲಿದೆ. ಅವುಗಳ ನೆರವಿನೊಂದಿಗೆ ಸಿಗ್ನಲ್‌ಗ‌ಳಲ್ಲಿರುವ ಕ್ಯಾಮರಾಗಳು ಸಂಚಾರ ದಟ್ಟಣೆಗೆ ಅನುಗುಣವಾಗಿ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತವೆ. ಜತೆಗೆ ದಟ್ಟಣೆಗೆ ಅನುಗುಣವಾಗಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ. ಪ್ರಾಯೋಗಿಕವಾಗಿ 35 ಜಂಕ್ಷನ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next