ಯಡ್ರಾಮಿ: ತಾಲೂಕಿನ ಮಳ್ಳಿ-ನಾಗರಳ್ಳಿ ಉಗಾರ ಶುಗರ್ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಬೆಳೆಗಾರರನ್ನು ಸೂಲಿಗೆ ಮಾಡುತ್ತಿರುವುದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಕಾರ್ಖಾನೆ ಡಿಸೆಂಬರ್ ಹೊತ್ತಿಗೆ ಕಬ್ಬು ನುರಿಸುವುದನ್ನು ಪ್ರಾರಂಭ ಮಾಡಿದೆ. ಇಲ್ಲಿಯ ವರೆಗೆ ದೂರದ ತಾಲೂಕುಗಳ ಗ್ರಾಮಗಳಿಂದ ಕಬ್ಬು ತರಿಸಿಕೊಂಡಿದ್ದಾರೆ. ಸ್ಥಳೀಯ ರೈತರ ಕಬ್ಬು ಕಟಾವು ಮಾಡುಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮೇಲಾಗಿ ಅಲ್ಲೊಂದು-ಇಲ್ಲೊಂದು ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ಕಾರ್ಮಿಕರ ತಂಡ ಇದ್ದರೂ, ಪ್ರತಿ ಎಕರೆ ಕಬ್ಬು ಕಟಾವಿಗೆ 15ಸಾವಿರ ರೂ. ಬೇಡಿಕೆ ಇಡುತ್ತಿರುವುದು ಸಾಮಾನ್ಯವಾಗಿದೆ ಎಂದು ರೈತ ಸಿದ್ದು ದುಮ್ಮದ್ರಿ ಆರೋಪಿಸಿದ್ದಾರೆ. ಕಾರ್ಖಾನೆಯವರು ರೈತರಿಗೆ ಕಬ್ಬಿನ ಬಿಲ್ ಪಾವತಿ ಮಾಡುವಾಗ ಕಟಾವಿಗೆ ತಗಲುವ ಖರ್ಚು ಪಡೆದುಕೊಂಡೇ ಹಣ ಜಮೆ ಮಾಡುತ್ತಾರೆ. ಆದರೂ ಮತ್ತೆ ರೈತರು ಪ್ರತಿ ಎಕರೆಗೆ 15-20 ಸಾವಿರ ರೂ. ನೀಡಲು ಒಪ್ಪಿದರೆ ಮಾತ್ರ ಕಬ್ಬು ಕಟಾವು ಆಗುತ್ತದೆ. ಇಲ್ಲದಿದ್ದರೆ ಕಬ್ಬು ಸುಟ್ಟು ಹಾಕಿ ಬೇರೆ ಬೆಳೆ ಬೆಳೆಯುವತ್ತ ಗಮನ ಹರಿಸುವ ಸ್ಥಿತಿ ಬಂದಿದೆ ಎಂದು ಕಬ್ಬು ಬೆಳೆದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮುಂದೆಯೂ ಇದೇ ಪರಿಸ್ಥಿತಿ ಬಂದರೆ ಸ್ಥಳೀಯ ರೈತರು ಕಬ್ಬು ಬೆಳೆಯುವದನ್ನೆ ಬಿಡುವಂತೆ ಆಗುತ್ತದೆ. ಕೂಡಲೇ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮಳ್ಳಿ, ನಾಗರಳ್ಳಿ, ದುಮ್ಮದ್ರಿ, ಕಾಚಾಪುರ, ಮಾಗಣಗೇರಿ, ಅಲ್ಲಾಪುರ, ವಡಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಕಬ್ಬು ಕಡಿಮೆ ಖರ್ಚಿನಲ್ಲಿ ಕಟಾವು ಮಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.