ಮಾಗಡಿ: ಇತ್ತೀಚೆಗೆ ಜಂಬು ನೇರಳೆ ಹಣ್ಣಿಗೆ ಭಾರೀ ಬೇಡಿಕೆ ಉಂಟಾಗಿದೆ. ವರ್ಷಕ್ಕೊಮ್ಮೆ ಸಿಗುವ ಅಪರೂಪದ ಜಂಬು ನೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಔಷಧಿ ಗುಣ ಇದೆ ಎಂಬ ಹಿನ್ನೆಲೆಯಲ್ಲಿ ಜಂಬು ನೇರಳೆಗೆ ಭಾರೀ ಬೇಡಿಕೆ ಕಂಡು ಬಂದಿದ್ದು, ಕೆ.ಜಿ.ಗೆ 200ರಿಂದ 250 ರೂ.ಗೆ ಮಾರಾಟವಾಗುತ್ತಿದೆ.
ಈಗ ಮಾರುಕಟ್ಟೆಯಲ್ಲಿ ಜಂಬು ನೇರಳೆಗೆ ಭಾರೀ ಬೇಡಿಕೆ ಕಂಡು ಬಂದಿದ್ದು, ಮಾವಿನ ಫಸಲಿನ ಜೊತೆ ನೇರಳೆ ಹಣ್ಣಿಗೂ ಭಾರೀ ಬೇಡಿಕೆ ಬಂದಿದೆ. ನೇರಳೆ ಹಣ್ಣಿ ಸುಗ್ಗಿ ಆರಂಭವಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಸಾಮಾಜಿಕ ಅರಣ್ಯ ಇಲಾಖೆಯವರು ತಾಲೂಕಿನ ಪ್ರಮುಖ ರಸ್ತೆ ಬದಿಗಳಲ್ಲಿ ಜಂಬು ನೇರಳೆ ಹಾಕಿದ್ದಾರೆ. ಜೊತೆಗೆ ಸಾವನದುರ್ಗ ಅರಣ್ಯ ಪ್ರದೇಶದಲ್ಲೂ ಕೂಡ ಜಂಬು ನೇರಳೆ ಮರಗಳಿದೆ. ಅಲ್ಲದೆ, ಕೃಷಿಕರು ತಮ್ಮ ಜಮೀನಿನಲ್ಲಿ ಉತ್ತಮ ಕಸಿಯ ನೇರಳೆ ಗಿಡಗಳನ್ನು ಹಾಕಿದ್ದು, 3 ವರ್ಷಕ್ಕೆ ಫಸಲು ಬಿಡಲು ಆರಂಭವಾಗಿರುವುದರಿಂದ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಮೊದಲು ಉಚಿತವಾಗಿ ಹಣ್ಣುಗಳು ಸಿಗುತ್ತಿತ್ತು. ಆದರೆ, ಈಗ ಔಷಧಿ ಗುಣ ಇರುವುದು ಪತ್ತೆಯಾಗಿರುವುದರಿಂದ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ರೈತರು ನೇರಳೆ ಗಿಡ ಬೆಳೆಸುತ್ತಿದ್ದಾರೆ: ಜಂಬು ನೇರಳೆ ಹಣ್ಣು ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಫಸಲು ಖರೀದಿಸಿ, ಹಗಲು- ರಾತ್ರಿ ಕಾವಲಿದ್ದು ಉದ್ದನೆಯ ಬಿದಿರಿನ ಕಡ್ಡಿ ಸಹಾಯದಿಂದ ಮರ ಹತ್ತಿ ಹಣ್ಣು ಬಿಡಿಸಿ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುತ್ತಿದ್ದಾರೆ. ದೊಡ್ಡ ಗಾತ್ರದ ಒಂದು ಮರದ ಫಸಲು 60ರಿಂದ 80 ಸಾವಿರ ಮಾರಾಟವಾಗಿದ್ದು, ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬು ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ.
ಜಂಬು ನೇರಳೆ ಬೇಸಾಯ ಸುಲಭ: ಮಳೆಗಾಲದಲ್ಲಿ ಗಿಡ ನೆಟ್ಟು ಜಾನುವಾರ ಬಾಯಿ ಹಾಕದಂತೆ ನೋಡಿಕೊಂಡರೆ 2-3 ವರ್ಷಗಳಲ್ಲಿ ಬೆಳೆದು ನಿಲ್ಲುತ್ತದೆ. ವರ್ಷದಿಂದ ವರ್ಷಕ್ಕೆ ಫಸಲು ಕೂಡ ಹೆಚ್ಚಾಗುತ್ತಿದ್ದು, ಹುಳು ಬಾಧೆಗೆ ಒಂದೆರಡು ಸಲ ಔಷಧಿ ಸಿಂಪಡಿಸಿದರೆ ಸಾಕು ಉತ್ತಮ ಬೆಳೆ ಬರುತ್ತದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದ್ದಾರೆ.
ಜಂಬು ನೇರಳೆ ಹಣ್ಣನ್ನು ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ, ನೇರಳೆ ಹಣ್ಣು ಜ್ಯೂಸ್ ತಯಾರಿಕೆಯಲ್ಲೂ ಈ ಹಣ್ಣನ್ನು ಬಳಸಲಾಗುತ್ತದೆ. ಔಷಧಿ ಗುಣ ಹೆಚ್ಚಾಗಿರುವುದರಿಂದ ಮಧುಮೇಹ ಇರುವ ವ್ಯಕ್ತಿಗಳು ಈ ಹಣ್ಣನ್ನು ಹೆಚ್ಚಾಗಿ ಬಳಸುತ್ತಾರೆ. ಮಾಗಡಿ ಮಾರುಕಟ್ಟೆಯಲ್ಲಿ ಜಂಬು ನೇರಳೆ ಹಣ್ಣು ಭರ್ಜರಿಯಾಗಿ ವ್ಯಾಪಾರವಾಗುತ್ತಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.
● ತಿರುಮಲೆ ಶ್ರೀನಿವಾಸ್