ಬೆಂಗಳೂರು: ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವ ಕುರಿತ ಕೋರ್ಟ್ ಆದೇಶವನ್ನು 15 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡದಿದ್ದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಈುರಿತು ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆ ಬಂದಿತ್ತು.
ಈ ವೇಳೆ ಸರ್ಕಾರದ ಪರ ವಕೀಲರು, ಕೋರ್ಟ್ ಆದೇಶ ಪಾಲನೆಯ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು. ಇದರಿಂದ ಕೋಪಗೊಂಡ ನ್ಯಾಯಪೀಠ, ವಸ್ತುಸ್ಥಿತಿ ವರದಿ ಸಲ್ಲಿಸಲು ಇದೇನು “ನಾಪತ್ತೆ ಪ್ರಕರಣವೇ’. ವಸ್ತುಸ್ಥಿತಿ ವರದಿ, ಅಂಕಿ-ಅಂಶ ಬೇಡ, ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿದ ವರದಿ ಬೇಕು. ಅಂತಿಮವಾಗಿ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಬಿಡಿ ಬಿಡಿಯಾಗಿ ಅಲ್ಲ., ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಆ ದಿನ ವಿಫಲವಾದಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕೋರ್ಟ್ ಮುಂದೆ ಹಾಜರಾಗಬೇಕು. ಅವರ ವಿರುದ್ದ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು. ಅಧಿಕಾರಿಯನ್ನು ಜೈಲಿಗೆ ಕಳಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ಹೆಣ ರಸ್ತೆಯಲ್ಲಿ ಹಾಕಬೇಕಾ? :
ಕೋರ್ಟ್ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೇ.60ರಷ್ಟು ಆಗಿದೆ ಎಂದು ಸರ್ಕಾರದ ಪರ ವಕೀಲರು ವಿವರಣೆ ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಸ್ಮಶಾನಕ್ಕೆ ಜಾಗ ಇಲ್ಲದ ಶೇ.40ರಷ್ಟು ಕಡೆ ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ ಎಂದು ತರಾಟೆಗೆ ತೆಗೆದುಕೊಂಡರು. ಸರ್ಕಾರ ಮಾಡುವ ಕೆಲಸ ಕೋರ್ಟ್ ಮಾಡಬೇಕಾಗಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು. ಸತ್ತವರಿಗೆ ಸ್ಮಶಾನಕ್ಕೆ ಜಾಗ ಒದಗಿಸಲು ಸರ್ಕಾರ ಇಷ್ಟೊಂದು ಬೇಜಾಬ್ದಾರಿಯಿಂದ ವರ್ತಿಸುತ್ತಿರುವುದು ಕಳವಳಕಾರಿ ಸಂಗತಿ. ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ಓಟ್ ಹಾಕುತ್ತಾರೆ. ಇದೊಂದು ಓಟ್ ಗಿಟ್ಟಿಸುವ ಕಾರ್ಯಕ್ರಮವೆಂದಾದರೂ ಸರ್ಕಾರ ಪರಿಗಣಿಸಬೇಕಿತ್ತು ಎಂದು ನ್ಯಾಯಪೀಠ ಚಾಟಿ ಬೀಸಿತು.
ನೀವು ಭಂಡ ಆದ್ರೆ ನಾವು ಜಗಭಂಡ:
ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳಿಗೆ ಅಗತ್ಯ ಭೂಮಿಯನ್ನು ಆರು ತಿಂಗಳಲ್ಲಿ ಒದಗಿಸುವಂತೆ 2019ರಲ್ಲಿ ಕೋರ್ಟ್ ಆದೇಶ ಮಾಡಿತ್ತು. ಮೂರು ವರ್ಷವಾದರೂ ಈ ಆದೇಶವನ್ನು ಪಾಲಿಸಿಲ್ಲ. ಸರ್ಕಾರದ 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಲಾಯಿತು. ಹಲವು ಬಾರಿ ನಿರ್ದೇಶನ ನೀಡಲಾಯಿತು. ಅಂತಿಮವಾಗಿ ಒತ್ತುವರಿಯಾಗಿರುವ 1.77 ಲಕ್ಷ ಎಕರೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಸ್ಮಶಾನಕ್ಕೆ ಜಾಗ ಒದಗಿಸಲು 6 ತಿಂಗಳು ಕಾಲಾವಕಾಶ ನೀಡಿ 2022ರ ಜ.21ಕ್ಕೆ ಆದೇಶ ನೀಡಲಾಗಿತ್ತು. ಸರ್ಕಾರ ಅದನ್ನೂ ಪಾಲಿಸಿಲ್ಲ. ಜೊತೆಗೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿಯೂ ಸಲ್ಲಿಸಿಲ್ಲ. ಈ ರೀತಿ ಸುಮ್ಮನೆ ಕಾಲ ತಳ್ಳುತ್ತಿದೆ. ಸರ್ಕಾರದ ಧೈರ್ಯ ಮೆಚ್ಚಬೇಕು ಎಂದು ತೀಕ್ಷಣವಾಗಿ ಹೇಳಿದ ನ್ಯಾಯಪೀಠ, ಸರ್ಕಾರ ಭಂಡವಾದರೆ ನಾವು (ಕೋರ್ಟ್) ಜಗ ಭಂಡ. ಕೋರ್ಟ್ ಆದೇಶ ಪಾಲನೆ ಮಾಡುವ ತನಕ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿತು.