Advertisement

ಸ್ವಾಧೀನಾನುಭವ ಪತ್ರ ವಿವಾದ: ಬಿಬಿಎಂಪಿಗೆ ಹೈ ಚಾಟಿ

11:23 AM Apr 10, 2019 | Lakshmi GovindaRaju |

ಬೆಂಗಳೂರು: ಖಾಸಗಿ ಅಪಾರ್ಟ್‌ಮೆಂಟ್‌ಗೆ ಸ್ವಾಧೀನಾನುಭವ ಪತ್ರ (ಒಸಿ) ನೀಡದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೋಮವಾರವೂ ಚಾಟಿ ಬೀಸಿದ ಹೈಕೋರ್ಟ್‌, ಪಾಲಿಕೆ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

Advertisement

ಖಾಸಗಿ ನಿರ್ಮಾಣ ಸಂಸ್ಥೆಯೊಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್‌.ಎನ್‌ ಸತ್ಯನಾರಾಯಣ ಪಾಲಿಕೆ ಅಧಿಕಾರಿಗಳ ಮೇಲೆ ಕೋಪಗೊಂಡರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆ ವೇಳೆ, ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲಿ ಸ್ವಾಧೀನಾನುಭವ ಪತ್ರ ಮಂಜೂರಾತಿ ಕುರಿತ ಸಂಪೂರ್ಣ ಮಾಹಿತಿ ಒಗದಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನ್ಯಾಯಪೀಠ ತಾಕೀತು ಮಾಡಿತ್ತು.

ಅದರಂತೆ, ಸೋಮವಾರ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಸ್ವಾಧೀನಾನುಭವ ಪತ್ರ ನೀಡಲು ಈ ಹಿಂದೆ ವಿಧಿಸಿದ್ದ 4 ಶರತ್ತುಗಳನ್ನು ವಾಪಸ್‌ ಪಡೆಯಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ನೀವು ಹೇಳಿದಂತೆ ಬರೆದುಕೊಳ್ಳಲು ನಾವು ಇಲ್ಲಿ ಕುಳಿತಿಲ್ಲ.

ಅಧಿಕಾರಿಗಳ ಸೆಗಣಿ ತಿನ್ನುವ ಕೆಲಸ ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳಬೇಕಾ, ಅಧಿಕಾರಿಗಳು ಕಾನೂನಿಗೆ ಬೆಲೆ ಕೊಡಲ್ಲ. ಅವರಿಗೆಲ್ಲ ರೌಡಿಗಳ ಮಾರ್ಗದರ್ಶನ ಹಾಗೂ ಕುಮ್ಮಕ್ಕು ಇದೆ. ಸ್ವಾಧೀನಾನುಭವ ಖಾತೆ ಮಂಜೂರು ಮಾಡುವುದು ಬೆಂಗಳೂರಿನಲ್ಲಿ ಒಂದು ಧಂದೆಯಾಗಿ ಬಿಟ್ಟಿದೆ. ಅದರಲ್ಲಿ ಶಾಮೀಲಾಗಿರುವ ಎಲ್ಲರನ್ನೂ ನೇಣಿಗೇರಿಸಬೇಕು ಎಂದು ಕಠಿಣ ಮಾತುಗಳಲ್ಲಿ ಹೇಳಿದರು.

ಪಾಲಿಕೆಯ ಈ ನಾಟಕ ನನ್ನ ಬಳಿ ನಡೆಯುವುದಿಲ್ಲ. ಇದಕ್ಕೆಲ್ಲ ಯಾವ ರೀತಿ ಬ್ರೆಕ್‌ ಹಾಕಬೇಕು ಅನ್ನೋದು ಕೋರ್ಟ್‌ಗೆ ಗೊತ್ತು ಎಂದ ನ್ಯಾಯಮೂರ್ತಿಗಳು, ಈ ಹಿಂದೆ ವಿಧಿಸಿದ್ದ ಶರತ್ತುಗಳನ್ನು ಯಾಕೆ ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಪ್ರಮಾಣಪತ್ರ ಸಲ್ಲಿಸಬೇಕು.

Advertisement

ಅಲ್ಲದೇ ಅಪಾರ್ಟ್‌ಮೆಂಟ್‌ಗಳನ್ನು ನೋಂದಣಿ ಮಾಡಬಾರದು ಎಂದು ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಯಾವ ಆಧಾರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಬಗ್ಗೆ ವಿವರಣೆ ಕೊಡಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಏ.12ಕ್ಕೆ ಮುಂದೂಡಿತು.

ಇದೇ ವೇಳೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ಪಾಲಿಕೆ ಆಯುಕ್ತರಿಗೆ ವಿನಾಯಿತಿ ನೀಡಿದ ನ್ಯಾಯಮೂರ್ತಿಗಳು, ಉಳಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ತಾಕೀತು ಮಾಡಿತು. ಅಲ್ಲದೇ ಪಾಲಿಕೆ ಸಲ್ಲಿಸಿದ ದಾಖಲೆಗಳಲ್ಲಿ 396 ಪ್ರಕರಣಗಳಲ್ಲಿ ಸ್ವಾಧೀನಾನುಭವ ಪತ್ರ ನೀಡದಿರುವುದನ್ನು ಗಮನಿಸಿದ ನ್ಯಾಯಪೀಠ, ಈ ವಿಷಯವನ್ನು ಇಲ್ಲಿಗೆ ಬಿಡುವುದಿಲ್ಲ.

ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಿ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿಸ್ಥರನ್ನು ಶಿಕ್ಷಿಸಲಾಗುವುದು. ಅಗತ್ಯ ಬಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನೂ ಸಹ ಹೊರಡಿಸಲಾಗುವುದು ಎಂದು ಮೌಖೀಕವಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next