Advertisement

ತಹಶೀಲ್ದಾರ್‌ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್‌

12:24 PM May 24, 2017 | |

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ರಾಮನಗರ ತಹಶೀಲ್ದಾರ್‌ ಎನ್‌. ರಘುಮೂರ್ತಿಗೆ ಜೈಲು ಶಿಕ್ಷೆ ವಿಧಿಸಿದ್ದ ಮೈಸೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಅಮಾನತ್ತಿನಲ್ಲಿರಿಸಿ ಮಂಗಳವಾರ ಆದೇಶ ನೀಡಿದೆ.

Advertisement

2011ರಲ್ಲಿ ಮೈಸೂರಿನಲ್ಲಿ ಶಿರಸ್ತೇದಾರ್‌ ಆಗಿದ್ದ ವೇಳೆ  ಆಸ್ತಿ ಖಾತಾ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮೈಸೂರು ಲೋಕಾಯುಕ್ತ ನ್ಯಾಯಾಲಯ ಕಳೆದ ಏಪ್ರಿಲ್‌ 24ರಂದು ರಘುಮೂರ್ತಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವುದು ಹಾಗೂ ಜಾಮೀನು ನೀಡುವಂತೆ ಕೋರಿ ರಘುಮೂರ್ತಿ ಹೈಕೋರ್ಟ್‌ ಮೊರೆಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಜಾನ್‌ ಮೈಕಲ… ಕುನ್ಹಾ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ಅಮಾನತ್ತಿನಲ್ಲಿಟ್ಟು, ಅಧೀನ ನ್ಯಾಯಾಲಯ ವಿಧಿಸಿರುವ 50  ಸಾವಿರ ಠೇವಣಿ, ಇಬ್ಬರ ಭದ್ರತಾ ಖಾತ್ರಿ, ಒಂದು  ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌ ಒದಗಿಸುವ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.

ಅರ್ಜಿದಾರರ ಪರ ವಕೀಲ ಎಸ್‌.ಅಹಮದ್‌ ವಾದಿಸಿ, ಯಾವುದೇ ಸರ್ಕಾರಿ ಅಧಿಕಾರಿ ಮೇಲೆ ಪ್ರಕರಣ ಸಂಬಂಧ ಮೊದಲು ಎಫ್ಐಆರ್‌ ದಾಖಲಿಸಿ ಬಳಿಕ ದಾಳಿ ನಡೆಸಬೇಕು ಎಂಬ ಕಾನೂನು ನಿಯಮವಿದೆ. ಆದರೆ  ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮೊದಲು ದಾಳಿ ನಡೆಸಿ ಬಳಿಕ ಎಫ್ಐಆರ್‌ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಅಂಶಗಳನ್ನು ಪರಿಗಣಿಸದೇ ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ನ್ಯಾಯಪೀಠಕ್ಕೆ ಕೋರಿದರು.

ಮೇ 10ರಂದು ರಘುಮೂರ್ತಿ ನಿವಾಸದ ಮೇಲೆ ಎಸಿಬಿ ದಾಳಿಯಾಗಿತ್ತು
ಮತ್ತೂಂದೆಡೆ ಮೇ 10ರಂದು ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ  ರಾಮನಗರ ತಹಶೀಲ್ದಾರ್‌ ಎನ್‌.ರಘುಮೂರ್ತಿ ಹೆಸರಿನಲ್ಲಿರುವ ನಾಗರಬಾವಿಯ ನಾಯಕ ಲೇಔಟ್‌ನಲ್ಲಿರುವ ಮನೆ ಹಾಗೂ ರಾಮನಗರದ ತಹಶೀಲ್ದಾರ್‌ ಕಚೇರಿ ಹಾಗೂ ಚಿಕ್ಕಮಗಳೂರಿನಲ್ಲಿರುವ ಇವರ ತಂದೆಯ ವಾಸದ ಮನೆಯ ಮೇಲೆ  ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. 

Advertisement

ಈ ವೇಳೆ  185 ಗ್ರಾಂ ಚಿನ್ನ, 4 ಕೆ.ಜಿ ಬೆಳ್ಳಿ ಹಾಗೂ 81 ಸಾವಿರ ನಗದು, 36 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿದ್ದವು. ತಂದೆ, ತಾಯಿ ಮತ್ತು ಹೆಂಡತಿ ಹೆಸರಿನಲ್ಲಿ ಬೆಂಗಳೂರು, ಚಿಕ್ಕಮಗಳೂರು ಮತ್ತು ಮೈಸೂರಿನ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 11 ಖಾತೆಗಳನ್ನು ತೆರೆದಿದ್ದು,  2.17 ಕೋಟಿಗಳ ಠೇವಣಿ ಮತ್ತು ಉಳಿತಾಯ ಖಾತೆ ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next