Advertisement

ಬೆಂಗಳೂರು ಸೇರಿ 4 ಜಿ.ಪಂ ಅಧ್ಯಕ್ಷರ ಚುನಾವಣೆಗೆ ಹೈಕೋರ್ಟ್‌ ತಡೆ

06:20 AM Oct 31, 2017 | Team Udayavani |

ಬೆಂಗಳೂರು: ಬೆಂಗಳೂರು ನಗರ, ರಾಮನಗರ, ತುಮಕೂರು, ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಸ್ಥಾನಗಳ ಚುನಾವಣೆ ಕುರಿತು ಸಲ್ಲಿಕೆಯಾಗಿರುವ ತಕರಾರು ರಿಟ್‌ ಅರ್ಜಿ ಇತ್ಯರ್ಥವಾಗುವ ತನಕ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮೌಖೀಕ ಆದೇಶ ನೀಡಿದೆ.

Advertisement

ಪಂಚಾಯತ್‌ ರಾಜ್‌ ಕಾಯಿದೆ 179 ಅಧಿನಿಯಮ ಪ್ರಶ್ನಿಸಿ ನಾಲ್ವರು ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಸಲ್ಲಿಸಿರುವ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಸೋಮವಾರ ಈ
ನಿರ್ದೇಶನ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವ
ಜಿಲ್ಲಾ ಪಂಚಾಯತ್‌ ಅಧ್ಯಕ್ಷರಿಂದ ಅವಧಿಗೂ ಮುನ್ನವೇ ರಾಜೀನಾಮೆ ಪಡೆದುಕೊಂಡಿರುವ ಕ್ರಮ ಸರಿಯಲ್ಲ.

ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ತಾನಾಗಿಯೇ 15 ದಿನಗಳಲ್ಲಿ ಅದು ಅಂಗೀಕೃತವಾಗಲಿದೆ. ಹೀಗಾಗಿ,
ರಾಜೀನಾಮೆ ನೀಡಿದ 15 ದಿನದಲ್ಲಿಯೇ ಅಂಗೀಕಾರವಾಗುವ ನಿಯಮವನ್ನು ರದ್ದುಪಡಿಸುವಂತೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರು ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾಗಿದ್ದಾರೆ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಅನ್ವಯವಾಗುವ ಪಂಚಾಯತ್‌ ರಾಜ್‌ ಕಾಯಿದೆ ನಿಯಮವನ್ನು ಪ್ರಶ್ನಿಸಿದ್ದಾರೆ.

ಈಗಾಗಲೇ ರಾಜೀನಾಮೆ ನೀಡಿದ್ದು, ಚುನಾವಣಾ ಪ್ರಕ್ರಿಯೆಗಳಿಗೆ ಸಿದಟಛಿತೆ ಮಾಡಿಕೊಳ್ಳಲಾಗುತ್ತಿದೆ. ಆದರೆ,
ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ರಿಟ್‌ ಅರ್ಜಿ ಇತ್ಯರ್ಥವಾಗುವ ತನಕ ಅರ್ಜಿದಾರರ ಜಿ.ಪಂ ಅಧ್ಯಕ್ಷ ಸ್ಥಾನಗಳ ಚುನಾವಣೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬಾರದು ಎಂದು ಸೂಚನೆ ನೀಡಿ ನ.17ಕ್ಕೆ ವಿಚಾರಣೆ ಮುಂದೂಡಿತು.

ಪಂಚಾಯತ್‌ ರಾಜ್‌ ಕಾಯಿದೆ 179 ಅಧಿನಿಯಮ ಪ್ರಶ್ನಿಸಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಅಧ್ಯಕ್ಷ
ಸಿ.ಮುನಿರಾಜು, ರಾಮನಗರ ಜಿ.ಪಂ ಅಧ್ಯಕ್ಷ ಸಿ.ಪಿ ರಾಜೇಶ್‌, ತುಮಕೂರು ಜಿ.ಪ.ಅಧ್ಯಕ್ಷೆ ಲತಾ ರವಿಕುಮಾರ್‌, ಚಿತ್ರದುರ್ಗ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next