ಬೆಂಗಳೂರು: ರಾಜ್ಯದಲ್ಲಿ ಜೂನ್ 1ರಿಂದ ಸೀಮಿತವಾಗಿ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳ ಕಲಾಪ ಆರಂಭಿಸುವ ಹಿನ್ನೆಲೆಯಲ್ಲಿ ವಿವಿಧ ಕೆಟಗರಿಯ ಪ್ರಕರಣಗಳಲ್ಲಿ ಎದುರಾಗುವ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳಿಗೆ ಪರಿಹಾರ ಹುಡುಕಲು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜತೆಗೆ ಕರ್ನಾಟಕ ವಕೀಲರ ಪರಿಷತ್ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಇದೇ ವೇಳೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಗತ್ಯ ಸಲಹೆ ನೀಡಲು ಅಮಿಕಸ್ ಕ್ಯೂರಿ ಆಗಿ ವಿಚಾರಣೆ ವೇಳೆ ಹಾಜರಾಗುವಂತೆ ಹಿರಿಯ ವಕೀಲರಾದ ಉದಯ ಹೊಳ್ಳ ಹಾಗೂ ಸಿ.ವಿ.ನಾಗೇಶ್ ಅವರಿಗೆ ನ್ಯಾಯಪೀಠ ಮನವಿ ಮಾಡಿದೆ. ಜಿಲ್ಲಾ ಕೋರ್ಟ್ ಕಲಾಪಗಳ ನಿರ್ವಹಣೆಗೆ ರೂಪಿಸಲಾದ ಮಾರ್ಗಸೂಚಿಗಳ (ಎಸ್‌ಒಪಿ) ಪ್ರತಿಯನ್ನು ಆ ಇಬ್ಬರು ಹಿರಿಯ ವಕೀಲರಿಗೆ ಒದಗಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರಿಮಿನಲ್ ಪ್ರಕರಣಗಳ ಸಂಬಂಧ ದೂರುದಾರರು ಖುದ್ದು ದೂರು ದಾಖಲಿಸುವ, ಆರೋಪಿಗಳು ಹೇಳಿಕೆ ದಾಖಲಿಸುವ, ಭದ್ರತಾ ಖಾತರಿ ಒದಗಿಸುವ, ನ್ಯಾಯಾಲಯಗಳು ದೋಷಾರೋಪ ಹೊರಿಸುವ, ರಿಮ್ಯಾಂಡ್ ಪ್ರಕ್ರಿಯೆ ಮತ್ತು ಲೋಕ್ ಅದಾಲತ್ ನಡೆಸುವ ವಿಚಾರದಲ್ಲಿ ಕಾನೂನಾತ್ಮಕ ಹಾಗೂ ತಾಂತ್ರಿಕ ತೊಡಕುಗಳು ಎದುರಾಗಿವೆ. ಅವುಗಳಿಗೆ ಪರಿಹಾರ ಹುಡುಕಬೇಕಿದೆ. ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲು ಅನುಕೂಲವಾಗುವಂತೆ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಲು ರಿಜಿಸ್ಟ್ರಾರ್ ಜನರಲ್‌ಗೆ ನ್ಯಾಯಪೀಠ ನಿರ್ದೇಶಿಸಿತ್ತು.