ಬೆಂಗಳೂರು: ಕಲ್ಲು ಗಣಿಗಾರಿಕೆ ನಿಯಂತ್ರಣ ನಿಯಮಗಳನ್ನು ಉಲ್ಲಂ ಸಿ ಕಾರ್ಕಳ ತಾಲೂಕಿನ ಉಪ್ಪರಿಗೆ ಮನೆ, ಶಿವಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಅಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವಿಚಾರವಾಗಿ ಭೋಜಶೆಟ್ಟಿ ಮತ್ತಿತರರು ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಸಚಿವ ಶಂಕರ್ ಮಗದಂ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿ, ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ 4ನೇ ಪ್ರತಿವಾದಿ ಮೂಕಾಂಬಿಕಾ ಸ್ಟೋನ್ ಕ್ರಷರ್ ನ ವ್ಯವಸ್ಥಾಪಕ ಪಾಲುದಾರರಾದ ಪ್ರಸನ್ನಶೆಟ್ಟಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೀವ್ರ ತೊಂದರೆ ಆಗುತ್ತಿದೆ. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿ ಕಾರಿಗಳಿಗೆ ಮನವಿ ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದರು.
ಅಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಕ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವುದು ಅರ್ಜಿದಾರರಿಗೆ ಸಂವಿಧಾನದ ಕಲಂ 21ರಡಿ ಲಭ್ಯವಿರುವ ಆರೋಗ್ಯದ ಹಕ್ಕಿಗೆ ತೊಂದರೆ ಆಗಿದೆ. ಹಿಂದೆ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪವಿದ್ದರೂ ಸಹ ಮತ್ತೆ ಲೈಸನ್ಸ್ ನವೀಕರಣ ಮಾಡಲಾಗಿದೆ. ಹಾಗಾಗಿ ನವೀಕರಣ ಮಾಡಿರುವ ಪರವಾನಗಿ ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಇದನ್ನೂ ಓದಿ:ಮಾಜಿ ಶಾಸಕ ಎಂ.ಪಿ. ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ಈಗಾಗಲೇ ನಾಲ್ಕನೇ ಪ್ರತಿವಾದಿ ಕೇವಿಯಟ್ ಸಲ್ಲಿಸಿದ್ದಾರೆ, ಹಾಗಾಗಿ ಅವರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಸರ್ಕಾರಿ ವಕೀಲರು, ಅರ್ಜಿದಾರರು ಈಗಾಗಲೇ ಇದೇ ವಿಷಯದ ಸಂಬಂಧ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಈ ಅರ್ಜಿ ಮಾನ್ಯ ಮಾಡಬಾರದು ಎಂದರು.
ಎನ್‌ಜಿಟಿಗೆ ಅರ್ಜಿ ಸಲ್ಲಿಸಿರುವುದನ್ನು ಸೇರಿದಂತೆ ಎಲ್ಲಾ ಮಾಹಿತಿಗಳನ್ನೊಳಗೊಂಡ ಆಕ್ಷೇಪಣೆಗಳನ್ನು ಸಲ್ಲಿಸಿ. ನಂತರ ಮುಂದಿನ ವಿಚಾರಣೆ ನಡೆಸೋಣ ಎಂದು ಸರ್ಕಾರಿ ವಕೀಲರಿಗೆ ಹೇಳಿದ ನ್ಯಾಯಪೀಠ ವಿಚಾರಣೆಯನ್ನು ನ15ಕ್ಕೆ ಮುಂದೂಡಿತು.
ನಿಯಮದ ಪ್ರಕಾರ ಕಲ್ಲು ಗಣಿಗಾರಿಕೆ ಘಟಕ ಗ್ರಾಮದಿಂದ 500 ಮೀಟರ್ ದೂರದಲ್ಲಿರಬೇಕು. ಆದರೆ ಘಟಕ 500 ಮೀಟರ್ ಒಳಗೆ ಇದೆ. ಜೊತೆಗೆ ಘಟಕ ಯಾವ ಷರತ್ತುಗಳನ್ನೂ ಪಾಲನೆ ಮಾಡುತ್ತಿಲ್ಲ, ಕಲ್ಲು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.