Advertisement

ಹೈಕೋರ್ಟ್‌ ತಳಮಹಡಿ ಕಚೇರಿಗಳ ಸ್ಥಳಾಂತರ

06:22 PM Oct 02, 2021 | Team Udayavani |

ಬೆಂಗಳೂರು: ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ ಕಟ್ಟಡ ಸಂಕೀರ್ಣದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಲು ನಗರದ ಅರಮನೆ ರಸ್ತೆಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕಟ್ಟಡದ ನೆಲಮಹಡಿಯ ಎರಡು ಕೊಠಡಿಗಳನ್ನು ಸುಪರ್ದಿಗೆ ಪಡೆಯಲಾಗಿದೆ ಎಂದು ರಿಜಿಸ್ಟ್ರಾರ್‌ ಜನರಲ್‌ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ವಿಚಾರವಾಗಿ ವಕೀಲ ಎಲ್‌. ರಮೇಶ್‌ ನಾಯಕ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರ್‌ ಗೌಡ ಅವರು ಈ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:-ಮಂತ್ರಿಗಳಿಂದ ಸ್ವಚ್ಛತಾ ಶ್ರಮದಾನ

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ನೆಲ ಮಹಡಿಯ 6 ಮತ್ತು 8ನೇ ಸಂಖ್ಯೆಯ ಎರಡು ಕೊಠಡಿಗಳನ್ನು 2021ರ ಸೆ.21ರಂದು ಹೈಕೋರ್ಟ್‌ ವಿಶೇಷ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಸುಪರ್ದಿಗೆ ಪಡೆದುಕೊಂಡಿದ್ದಾರೆ. ತಳಮಡಿಯಲ್ಲಿರುವ ಕೋರ್ಟ್‌ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ನಿರ್ದೇಶನ ಕೋರಿ ಹೈಕೋರ್ಟ್‌ ಕಟ್ಟಡ ಸಮಿತಿಗೆ ಮನವಿ ಮಾಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, ನಗರದ ಆನಂದ್‌ ರಾವ್‌ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಇಂಧನ ಭವನದಲ್ಲಿ ಒಂದು ಲಕ್ಷ ಚದರ ಅಡಿ ನಿರ್ಮಿತ ಪ್ರದೇಶವನ್ನು ಹೈಕೋರ್ಟ್‌ಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೆ.16ರಂದು ಕೋರಲಾಗಿದೆ ಎಂದು ರಿಜಿಸ್ಟಾರ್‌ ಜನರಲ್‌ ಮಾಹಿತಿ ನೀಡಿದ್ದಾರೆ.

ಹೈಕೋರ್ಟ್‌ ತಳಮಹಡಿಯಲ್ಲಿರುವ ಕಚೇರಿ ಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ನೆಲ ಮಹಡಿಗೆ ಸ್ಥಳಾಂತರ ವಿಚಾರದಲ್ಲಿ ಆದ ಬೆಳವಣಿಗೆ ಕುರಿತು ಮಾಹಿತಿ ನೀಡುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ನ್ಯಾಯಪೀಠವು 2021ರ ಸೆ.3ರಂದು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿತ್ತು.

Advertisement

ರಾಜ್ಯ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಸಂಕೀರ್ಣದಲ್ಲಿ ಬೋರ್ಡ್‌ ಬ್ರ್ಯಾಂಚ್‌, ಸಿವಿಲ್‌ ಹಾಗೂ ಕ್ರಿಮಿನಲ್‌ ಬ್ರಾಂಚ್‌ ಸೇರಿದಂತೆ ಇತರೆ ಕಚೇರಿ ಹಾಗೂ ಶಾಖೆಗಳು ತಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದೆ, ಆ ಕಚೇರಿಗಳಲ್ಲಿನ ಸಿಬ್ಬಂದಿ ಪ್ರತಿದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದ್ದಾರೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next