Advertisement

ಜೈಲುಗಳಲ್ಲಿ ಗಾಂಜಾ, ಕೈದಿಗಳಿಗೆ ರಾಜಾತಿಥ್ಯ

11:05 PM Feb 23, 2022 | Team Udayavani |

ಬೆಂಗಳೂರು: ರಾಜ್ಯದ ಕಾರಾಗೃಹಗಳಿಗೆ ಗಾಂಜಾ ಮತ್ತಿತರ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Advertisement

ಈ ಕುರಿತಂತೆ ನಗರದ ವಕೀಲ ಧರ್ಮಪಾಲ್‌ ಹಾಗೂ ಕೆ. ನಾರಾಯಣ ಶೆಟ್ಟಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ವಕೀಲ ಧರ್ಮಪಾಲ್‌ ವಾದ ಮಂಡಿಸಿ, ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಖುದ್ದು ಜೈಲು ಸಿಬಂದಿಯೇ ಮಾದಕ ವಸ್ತು ಪೂರೈಕೆ ಮಾಡುತ್ತಿರುವ ಆರೋಪವಿದೆ.

ಜೈಲುಗಳ ಒಳಗೆ ಸಿಸಿ ಟಿವಿ ಇಲ್ಲ. ಸೂಕ್ತ ಮೇಲ್ವಿಚಾರಣೆಯೂ ಇಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲರು ಮಾಧ್ಯಮ ವರದಿ ಆಧರಿಸಿ ಅರ್ಜಿ ಸಲ್ಲಿಸಲಾಗಿದೆ. ಜೈಲುಗಳ ಒಳಗೆ ಸಿಸಿ ಟಿವಿಗಳಿವೆ ಎಂದರು.

ಇದನ್ನೂ ಓದಿ:ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಹೆಸರು ಬದಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

Advertisement

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೈಲುಗಳ ಒಳಗಿನ ವಸ್ತು ಸ್ಥಿತಿ ಏನು, ಸಿಸಿ ಟಿವಿ ವ್ಯವಸ್ಥೆ ಹೇಗಿದೆ ಎನ್ನುವುದು ನಮಗೂ ಗೊತ್ತಿದೆ ಎಂದು ತೀಕ್ಷ್ಣವಾಗಿ ಹೇಳಿತು. ಬಳಿಕ, ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ, ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಬಂದೀಖಾನೆ ಡಿಜಿಪಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ
ಜೈಲುಗಳಲ್ಲಿನ ವ್ಯವಸ್ಥೆ ಸುಧಾರಣೆ ಮಾಡಲು ಸಿಸಿ ಟಿವಿ ಅಳವಡಿಸಬೇಕು. ಪೂರ್ಣಾವಧಿ ಮೇಲುಸ್ತುವಾರಿ ನಡೆಸಲು ಪ್ರತ್ಯೇಕ ವಿಚಕ್ಷಣಾ ದಳ ಸ್ಥಾಪಿಸಬೇಕು. ಮಾದಕವಸ್ತು ಪೂರೈಕೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next