Advertisement

ಎಸಿಬಿಗೆ ಕಳಂಕಿತ ಅಧಿಕಾರಿಗಳ ನೇಮಕ ಬೇಡ: ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ

09:00 PM Jul 11, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಂತಹ (ಎಸಿಬಿ) ಸಂಸ್ಥೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು ಎಂದು ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಉಪ ತಹಶೀಲ್ದಾರ್‌ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸೇವಾ ದಾಖಲೆ (ಸರ್ವೀಸ್‌ ರೆಕಾರ್ಡ್‌) ಹಾಗೂ ಸಮಗ್ರತೆಯನ್ನು ಪರಿಗಣಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿಗೆ ನಿರ್ದೇಶನ ನೀಡಿತು.

ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಭ್ರಷ್ಟಾಚಾರ ತಡೆಯಲೆಂದೇ ರಚಿಸಲಾಗಿರುವ ಎಸಿಬಿಗೆ ನೇಮಕವಾಗುವ ಅಧಿಕಾರಿ ಬಗ್ಗೆ ವಿಶ್ವಾಸಾರ್ಹತೆ ಇರಬೇಕು. ಸಂಸ್ಥೆಯ ಘನತೆಯನ್ನು ಉನ್ನತ ಹಂತಕ್ಕೆ ಒಯ್ಯುವ ಕ್ಷಮತೆ ಇರಬೇಕು ಎಂದು ನ್ಯಾಯಪೀಠ ಹೇಳಿದೆ.

ಅಧಿಕಾರಿಗಳ ನೇಮಕಾತಿ ವೇಳೆ ಯಾವುದೇ ಒತ್ತಡ, ಪ್ರಭಾವಗಳಿಗೆ ಒಳಗಾಗಬಾರದು. ನೇಮಕ ಮಾಡಲಾಗುವ ಅಧಿಕಾರಿ ವಿರುದ್ಧ ಎಸಿಬಿ ಅಥವಾ ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು. ಅವರ ಕುಟುಂಬ ಸದಸ್ಯರ ವಿರುದ್ಧವೂ ಯಾವುದೇ ತನಿಖೆ ನಡೆಯುತ್ತಿರಬಾರದು ಎಂದು ಸರಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಜು.13ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next