ಬೆಂಗಳೂರು: ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಡಿ. 4ರಂದು ನಡೆಯಲಿದ್ದ ಚುನಾವಣೆಗೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ಚುನಾವಣೆಯ ವೇಳಾಪಟ್ಟಿಯನ್ನು ಪ್ರಶ್ನಿಸಿ ಭಾರತೀಯ ವಕೀಲರ ಪರಿಷತ್ ಸದಸ್ಯರೂ ಆಗಿರುವ ಹಿರಿಯ ವಕೀಲ ವೈ. ಆರ್. ಸದಾಶಿವ ರೆಡ್ಡಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್, ಭಾರತೀಯ ವಕೀಲರ ಪರಿಷತ್‌ನ ಹಾಲಿ ಸಮಿತಿಯ ಪದಾಧಿಕಾರಿಗಳ ಅಧಿಕಾರಾವಧಿ 2022ರ ಎ.17ರ ವರೆಗೂ ಇದೆ. ಅದಕ್ಕೂ ನಾಲ್ಕು ತಿಂಗಳ ಮೊದಲೇ ಚುನಾವಣೆ ನಡೆಸುವ ಕ್ರಮ ನ್ಯಾಯಸಮ್ಮತವಲ್ಲ. ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗೆಗಿನ ನಿಯಮಗಳನ್ನು ಸ್ಪಷ್ಟಪಡಿಸಿಲ್ಲ. ಯಾವುದೇ ಶಾಸನಾತ್ಮಕ ನೋಟಿಸ್ ನೀಡದೆಯೇ ಚುನಾವಣ ಸಭೆ ನಡೆಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ
ಈ ವಾದ ಪರಿಗಣಿಸಿದ ನ್ಯಾಯಪೀಠ, ಹಾಲಿ ಸಮಿತಿಯ ಅಧಿಕಾರಾವಧಿ 2022ರ ಎ. 17ರಂದು ಮುಕ್ತಾಯವಾಗಲಿದೆ. ಅದಕ್ಕೂ ಮುನ್ನವೇ ಚುನಾವಣೆ ನಿಗದಿಪಡಿಸಿರುವುದಕ್ಕೆ ಸೂಕ್ತ ಕಾರಣ ಇಲ್ಲ. ಚುನಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿದರೆ ಯಾರೊಬ್ಬರಿಗೂ ತೊಂದರೆ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಚುನಾವಣೆಗೆ ಮಧ್ಯಾಂತರ ತಡೆ ನೀಡಿದೆ.
ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ನಿರ್ದೇಶಕರ ಸ್ಥಾನಗಳಿಗೆ ಡಿ.4ರಂದು ಚುನಾವಣೆ ನಡೆಸಲು ಭಾರತೀಯ ವಕೀಲರ ಪರಿಷತ್ 2021ರ ನ.19ರಂದು ನಿರ್ಣಯ ಕೈಗೊಂಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.