Advertisement

High Court : ಜಯಲಲಿತಾ ಆಭರಣ ಹಸ್ತಾಂತರಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

10:17 AM Mar 06, 2024 | Team Udayavani |

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದರು ಎನ್ನಲಾದ, ಸದ್ಯ ಬೆಂಗಳೂರಿನ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿರುವ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

Advertisement

ಈ ವಿಚಾರವಾಗಿ ಜಯಲಲಿತಾ ಪುತ್ರಿ ಜೆ.ದೀಪಾ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೆ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂಕೋರ್ಟ್‌ನಿಂದ ತೀರ್ಪು ಬರುವ ಮುನ್ನವೇ ಅವರು ಮೃತರಾಗಿದ್ದರು. ಆದ ಕಾರಣ ಅವರನ್ನು ಆರೋಪ ಮುಕ್ತರು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಆದ್ದರಿಂದ ಅರ್ಜಿದಾರರು ಜಯಲಲಿತಾ ಅವರ ಕಾನೂನುಬದ್ಧ ವಾರಸುದಾರರಾಗಿದ್ದು ಅವರ ಎಲ್ಲ ಚಿನ್ನಾಭರಣಗಳನ್ನು ಅರ್ಜಿದಾರರಿಗೆ ಹಸ್ತಾಂತರ ಮಾಡಬೇಕು ಎಂದು ಕೋರಿದರು.

ಈ ವಾದ ದಾಖಲಿಸಿಕೊಂಡ ನ್ಯಾಯಪೀಠ, ನಗರದ ವಿಶೇಷ ನ್ಯಾಯಾಲಯದಿಂದ ತಮಿಳುನಾಡು ಸರ್ಕಾರಕ್ಕೆ ನಾಳೆಯಿಂದ (ಮಾ.6) ಆಗಬೇಕಾಗಿದ್ದ ಚಿನ್ನಾಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನಗರದ 36ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 2024ರ ಮಾರ್ಚ್‌ 6 ಮತ್ತು 7ರಂದು ಜಯಲಲಿತಾ ಅವರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕ ನಿಗದಿ ಮಾಡಿತ್ತು.

Advertisement

ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದು ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರದಾನ ಕಾರ್ಯದರ್ಶಿ, ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫ‌ರ್‌ ಮತ್ತು ಆರು ದೊಡ್ಡ ಪೆಟ್ಟಿಗೆ (ಟ್ರಂಕ್‌) ಜತೆಗೆ ಅಗತ್ಯ ಭದ್ರತೆಯೊಂದಿಗೆ ಬಂದು ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು. ಈ ಅಂಶವನ್ನು ತಮಿಳುನಾಡು ಅಧಿಕಾರಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿತ್ತು.

7 ಕೆಜಿ ಚಿನ್ನ-ವಜ್ರ, 700 ಕೆಜಿ ಬೆಳ್ಳಿ! : 7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜಿರೇಟರ್‌, 10 ಟಿವಿ ಸೆಟ್‌ , 8 ವಿಸಿಆರ್‌, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್‌, 2 ಆಡಿಯೋ ಡೆಕ್‌, 24 ಟೂ-ಇನ್‌ ಒನ್‌ ಟೇಪ್‌ ರೆರ್ಕಾಡರ್‌, 1040 ವಿಡಿಯೋ ಕ್ಯಾಸೆಟ್, 3 ಐರನ್‌ ಲಾಕರ್‌, 1,93,202 ರು. ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next