ಕಲಬುರಗಿ: ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ರಮೇಶ ಸಂಗಾ ಅವರ ವರ್ಗಾವಣೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಆದೇಶವನ್ನು ಪ್ರಶ್ನಿಸಿ ಮತ್ತೊಬ್ಬ ಅಧಿಕಾರಿ ಸಲ್ಲಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ವಜಾಗೊಳಿಸಿ, ಅರ್ಜಿದಾರರಿಗೆ ಐದು ಸಾವಿರ ದಂಡ ವಿಧಿಸಿದೆ.
ಅರ್ಜಿದಾರರಾದ ನಿಕಟಪೂರ್ವ ಜಿಲ್ಲಾ ಬಿಸಿಎಂ ಅಧಿಕಾರಿ ದೇವಿಂದ್ರಪ್ಪ ಬಿರಾದಾರ ಅವರಿಗೆ 5 ಸಾವಿರ ದಂಡ ವಿಧಿಸಿದೆ. ದಂಡದ ಮೊತ್ತನ್ನು ಆದೇಶ ಪ್ರಕಟವಾದ 15 ದಿನಗಳೊಳಗಾಗಿ ರಮೇಶ ಸಂಗಾ ಅವರಿಗೆ ನೀಡಬೇಕು ಎಂದು ಆದೇಶದಲ್ಲಿ ಪೀಠ ತಿಳಿಸಿದೆ.
ಬಿಸಿಎಂ ಇಲಾಖೆಯು ರಮೇಶ ಸಂಗಾ ಅವರ ಅಧಿಕಾರಾವಧಿ ಮುಕ್ತಾಯವಾಗುವ ಮುನ್ನವೇ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ದೇವಿಂದ್ರಪ್ಪ ಬಿರಾದಾರ ಅವರನ್ನು ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಸಂಗಾ ಅವರು ಕೆಎಟಿಯ ಕಲಬುರಗಿ ಪೀಠದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪೀಠವು ಸಂಗಾ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಕಳೆದ ಅಕ್ಟೋಬರ್ 20ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ದೇವಿಂದ್ರಪ್ಪ ಅವರು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಕ್ವಾರಿಗಳಲ್ಲಿ ಅನಧಿಕೃತ ಸ್ಫೋಟಕಗಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಾನ್ ಮೈಕೆಲ್ ಕುನ್ಹಾ ಹಾಗೂ ಶಿವಶಂಕರ ಅಮರಣ್ಣನವರ ಅವರಿದ್ದ ನ್ಯಾಯಪೀಠವು ಅರ್ಜಿದಾರರು ಅವೈಜ್ಞಾನಿಕವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ, ಕೆಎಟಿ ಆದೇಶವನ್ನು ಎತ್ತಿ ಹಿಡಿದಿದೆ.
ಅಧಿಕಾರ ರಮೇಶ ಸಂಗಾ ಪರ ಹಿರಿಯ ವಕೀಲ ಪಿ. ವಿಲಾಸಕುಮಾರ್ ವಾದ ಮಂಡಿಸಿದ್ದರು.