Advertisement

High Court: ಶಿಕ್ಷಕರ ಮೇಲಿನ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

11:02 AM Feb 06, 2024 | Team Udayavani |

ಬೆಂಗಳೂರು: ಶಿಸ್ತು ವಿದ್ಯಾರ್ಥಿಗಳ ನಡವಳಿಕೆ ಮತ್ತು ವಿಶ್ಲೇಷಣಾ ಕೌಶಲ್ಯವನ್ನು ಸುಧಾರಿಸುತ್ತದೆ, ಜೀವನದಲ್ಲಿ ಯಶಸ್ಸು ಗಳಿಸಲು ಈ ಎರಡು ಅಂಶಗಳು ಅತಿ ಮುಖ್ಯ. ಶಿಕ್ಷೆ ಮತ್ತು ಸಕಾರಾತ್ಮಕ ಮನೋಭಾವದ ನಡುವೆ ಸಮತೋಲನ ಕಾಯ್ದುಕೊಳ್ಳಲು ಪರಿಣಾಮಕಾರಿ ಶಿಸ್ತು ಅಗತ್ಯ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್‌, ಇಬ್ಬರು ಶಿಕ್ಷಕಿಯರ ಮೇಲಿನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣವನ್ನು ಕೈಬಿಟ್ಟಿದೆ.

Advertisement

2014ರ ಮಾರ್ಚ್‌ 18ರಂದು ನಗರದ ಲಕ್ಕಸಂದ್ರದ ಮೇರಿ ಇಮ್ಮಾಕ್ಯುಲೇಟ್‌ ಹೈಸ್ಕೂಲ್‌ನ ಇಬ್ಬರು ವಿದ್ಯಾರ್ಥಿನಿಯರು ನಗರದ ಸ್ಯಾಂಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಬ್ಬ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಸಿಕ್ಕಿದ್ದ ಡೆತ್‌ನೋಟ್‌ನಲ್ಲಿ ಪ್ರಾಂಶುಪಾಲರಾದ ಎ.ಸಿ.ಮರಿಯಾ ಲೈಲಾ ಮತ್ತು ಶಿಕ್ಷಕಿ ಫಿಲೋಮಿನಾ ಇಮ್ಯಾನ್ಯುಯಲ್‌ ಅವರ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿತ್ತು. ಪೋಷಕರು ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಿಂದ ತಮ್ಮ ಮೇಲಿನ ಆರೋಪವನ್ನು ಕೈ ಬಿಡಬೇಕು ಎಂದು ಶಿಕ್ಷಕಿಯರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜಿ. ಬಸವರಾಜ ಅವರ ಏಕಸದಸ್ಯ ನ್ಯಾಯಪೀಠ, ಶಿಕ್ಷಕರು ರಾಷ್ಟ್ರ ನಿರ್ಮಾಣಕಾರರು. ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ನೀಡಿ ಅವರು ದೇಶದ ನಿರ್ಮಾಣ ಮಾಡುತ್ತಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ವಿದ್ಯಾರ್ಥಿಗಳು ಪಠ್ಯದತ್ತ ಗಮನ ನೀಡದಿದ್ದಾಗ, ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಗಳಿಸದಿದ್ದಾಗ, ಕ್ಲಾಸ್‌ ಬಂಕ್‌ ಅಥವಾ ತರಗತಿಗೆ ಗೈರಾದಾಗ ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ವಾಗ್ಧಂಡನೆ ಮಾಡುವುದು ಸಾಮಾನ್ಯ. ಇದನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರಾಗಿರುವ ಇಬ್ಬರೂ ಶಿಕ್ಷಕರು ಮೃತ ವಿದ್ಯಾರ್ಥಿಗಳನ್ನು ಆಗಾಗ್ಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇದರಿಂದ ಅವರು ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಮುಂದಾಗುವಂತಾಗಿದೆ. ಇದೇ ಕಾರಣದಿಂದ ಇಬ್ಬರೂ ಶಿಕ್ಷಕರ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ಸ್ಯಾಂಕಿ ಟ್ಯಾಂಕ್‌ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದಿಸಿದ್ದರು.

ವಿದ್ಯಾರ್ಥಿಗಳಿಗೆ ಶಿಕ್ಷಕರ ವಾಗ್ಧಂಡನೆ ಮಾಡುವುದು ಸಾಮಾನ್ಯ:

Advertisement

ಪ್ರಕರಣ ಸಂಬಂಧ ಅರ್ಜಿದಾರರು/ಆರೋಪಿಗಳ ಸ್ವಯಂಪ್ರೇರಿತ ಹೇಳಿಕೆ ಸೇರಿದಂತೆ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, ಶಾಲೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿರಲಿಲ್ಲ. ಹಾಗಾಗಿ, ಶಿಕ್ಷಕರು ಅವರಿಗಾಗಿ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಬೋಧನೆ ಮಾಡಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಬೇಕಾದರೆ, ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು. ಪ್ರಚೋದನೆ ಮತ್ತು ಸಾವು ನಿಕಟ ದಿನಗಳಲ್ಲಿ ಘಟಿಸಿರಬೇಕು.  ವಿದ್ಯಾರ್ಥಿಗಳಿಗೆ ಅರ್ಜಿದಾರ ಆರೋಪಿಗಳು ಕಿರುಕುಳ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ. ಜತೆಗೆ, ಅರ್ಜಿದಾರರು ಆತ್ಮಹತ್ಯೆಗೆ ಯಾವ ರೀತಿಯಲ್ಲಿ ಜವಾಬ್ದಾರರು ಎಂಬುದನ್ನು ತಿಳಿಯುವುದಕ್ಕೆ ಸಾûಾÂಧಾರಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ದೃಢವಾದ ಪುರಾವೆಗಳಿಲ್ಲ ಎಂದು ಹೇಳಿ ಪೀಠ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next